ಹಿಮಾಚಲ ಪ್ರದೇಶದಲ್ಲಿ ಪ್ರವಾಹ: 150 ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ

ಹಿಮಾಚಲ ಪ್ರದೇಶ: ಕಳೆದ 24 ಗಂಟೆಗಳಿಂದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದರಿಂದ, ಸೋಮವಾರ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ 150 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.

ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಮತ್ತು ಪ್ರವಹದಲ್ಲಿ ಸಿಲುಕಿದವರನ್ನ ಸ್ಥಳಾಂತರಿಸಲು ಆಡಳಿತ, ಪೊಲೀಸ್ ಮತ್ತು ಗಡಿ ರಸ್ತೆಗಳ ಸಂಸ್ಥೆ ಸಿಬ್ಬಂದಿ ಒಳಗೊಂಡ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿದೆ. ಲಾಹೌಲ್ ಉಪ ವಿಭಾಗದ ಸುಮ್ಡೋ-ಕಾಜಾ-ಗ್ರಾಂಫೂ ರಸ್ತೆಯು ಒಮ್ಮೆಲೇ ಉಂಟಾದ ಪ್ರವಾಹದಿಂದಾಗಿ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ ಚತ್ರು ಮತ್ತು ಡೋರ್ನಿ ಮೋರ್ಹ್ ಬಳಿ ಹಲವರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಮುಂದಿನ 48 ಗಂಟೆಗಳಲ್ಲಿ ಲಾಹೌಲ್-ಸ್ಪಿತಿ ಮತ್ತು ಕಿನ್ನೌರ್‌ನ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಪ್ರವಾಹದ ಮುನ್ಸೂಚನೆ ನೀಡಿದೆ.