ಬೆಂಗಳೂರು: ಸರ್ಕಾರಕ್ಕೆ ಆಟ, ಮಾಲಿಕರು, ಕಾರ್ಮಿಕರಿಗೆ ಪ್ರಾಣಸಂಕಟ ಎನ್ನುವಂತಾಗಿದೆ ಲೇಡಿಸ್ ಬಾರ್‌ಗಳ ಸ್ಥಿತಿ. ಬೆಂಗಳೂರಿನ ನೈಟ್ ಲೈಫ್‌ನ ಭಾಗವಾಗಿದ್ದ ಲೇಡಿಸ್ ಬಾರ್‌ಗಳನ್ನು ಕಾಂಗ್ರೆಸ್ ಸರ್ಕಾರ ಬಂದ ಬಳಿಕ 3 ತಿಂಗಳಿನಿಂದ ಬಂದ್ ಮಾಡಿಸಲಾಗಿದೆ. ಕಾರಣ ಇಲ್ಲದೆ ಲೇಡಿಸ್ ಬಾರ್‌ಗಳು ಬಂದ್ ಆಗಿರೋದಕ್ಕೆ 4,000ಕ್ಕೂ ಹೆಚ್ಚು ಕಾರ್ಮಿಕರು ಕಂಗಾಲಾಗಿದ್ದಾರೆ.ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಲೇಡಿಸ್ ಬಾರ್‌ಗಳನ್ನು ತೆರೆಯಲು ಸರ್ಕಾರ ಅವಕಾಶ ಕೊಡುತ್ತಿಲ್ಲ. ಆದರೆ ಅದೇ ಮ್ಯೂಸಿಕ್ ಹೊಂದಿರುವ ಪಬ್ ಮತ್ತು ಡೆಸ್ಕೊಥೆಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೆಲಸವಿಲ್ಲದೆ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಸಾಲ ಮಾಡಿ ಬಾರ್ ಓಪನ್ ಮಾಡಿರುವ ಮಾಲೀಕರು ತಿಂಗಳಾದರೆ ಬಾಡಿಗೆ ಬಡ್ಡಿ ಅಂತ ಲಕ್ಷಾಂತರ ರೂ. ಹಣ ಕಟ್ಟಬೇಕಿದೆ. ಕಾನೂನು ಅಡಿಯಲ್ಲಿ ಬಾರ್ ನಡೆಸಲು ಅನುಮತಿ ನೀಡಿ ಎಂದು ಗೃಹಮಂತ್ರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ.ಈ ಬಗ್ಗೆ ಲೇಡಿಸ್ ಬಾರ್ ಉಪಾಧ್ಯಕ್ಷ ಬಿಸಿ ಗೋಪಾಲಕೃಷ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಲೇಡಿಸ್ ಬಾರ್‌ಗಳನ್ನು ಬಂದ್ ಮಾಡಿಸಿದ್ದಾರೆ. ಪ್ರತಿಯೊಂದು ಹೋಟೆಲ್‌ಗಳಿಂದ 10 ಲಕ್ಷ ರೂ. ರಿನಿವಲ್ ಕಟ್ಟಿಸಿಕೊಂಡಿದ್ದೇವೆ. ನಮ್ಮಲ್ಲಿ 4-5 ಸಾವಿರ ಜನರು ಕೆಲಸಕ್ಕಿದ್ದಾರೆ. ಸುಮಾರು 15-20 ಸಾವಿರ ಜನರು ಈ ವ್ಯಾಪಾರದಿಂದ ಜೀವನ ಸಾಗಿಸುತ್ತಿದ್ದಾರೆ. ನಾವು ಈ ಬಗ್ಗೆ ಲೋಕಲ್ ಪೊಲೀಸ್ ಠಾಣೆಯಲ್ಲಿ ಕೇಳಿದಾಗ ಅವರು ತಮಗೆ ಸರ್ಕಾರದಿಂದ ಆದೇಶ ಬಂದಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ನಾವು ಗೃಹಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರವನ್ನು ನೀಡಿದ್ದೇವೆ. ಕೋರ್ಟ್ ಆರ್ಡರ್‌ಗಳನ್ನು ಕೂಡಾ ತಲುಪಿಸಿದ್ದೇವೆ. ಇದೀಗ 2-3 ತಿಂಗಳಿನಿಂದ ನಮ್ಮ ಉದ್ಯೋಗಿಗಳು ಊಟಕ್ಕೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ದಯವಿಟ್ಟು ನಮ್ಮ ಹೋಟೆಲ್‌ಗಳನ್ನು ಮತ್ತೆ ತೆರೆಯಲು ಅನುಮತಿ ನೀಡಬೇಕಾಗಿ ಎಲ್ಲಾ ಲೇಡಿಸ್ ಬಾರ್‌ಗಳ ಪರವಾಗಿ ಗೃಹಮಂತ್ರಿಗಳಿಗೆ ಹಾಗೂ ಸಿಎಂ ಅವರಿಗೆ ಮನವಿ ಮಾಡುತ್ತೇವೆ ಎಂದು ಗೋಪಾಲಕೃಷ್ಣ ನುಡಿದಿದ್ದಾರೆ.