ಭಾರತ ಹಾಗೂ ಐರ್ಲೆಂಡ್ ನಡುವಣ ಸರಣಿಗೆ ಇಂದು ಚಾಲನೆ ಸಿಗಲಿದೆ. ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಇಂದು ಡಬ್ಲಿನ್ನ ದಿ ವಿಲೇಜ್ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಯುವ ಪಡೆಯಿಂದ ಕೂಡಿರುವ ಟೀಮ್ ಇಂಡಿಯಾವನ್ನು ಜಸ್ಪ್ರಿತ್ ಬುಮ್ರಾ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಯಲ್ಲಿ ಭಾರತದ ಯುವಕರು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರದೆ ಸರಣಿಯನ್ನು ಕಳೆದುಕೊಂಡಿದ್ದರು. ಇದೀಗ ಐರಿಷ್ ನಾಡಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬುದನ್ನು ನೋಡಬೇಕಿದೆ.
ಜಸ್ಪ್ರಿತ್ ಬುಮ್ರಾ ಮೇಲೆ ಎಲ್ಲರ ಕಣ್ಣು:
ಜಸ್ಪ್ರಿತ್ ಕಮ್ಬ್ಯಾಕ್ ಟೀಮ್ ಇಂಡಿಯಾಕ್ಕೆ ಆನೆಬಲ ಬಂದಂತಾಗಿದೆ. ಸೆಪ್ಟೆಂಬರ್ 2022 ರಿಂದ ತಂಡದಿಂದ ಹೊರಗುಳಿದಿದ್ದ ಬುಮ್ರಾ, ಕಳೆದ ಬಾರಿಯ ಏಷ್ಯಾಕಪ್, ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಹ ಪ್ರಮುಖ ಟೂರ್ನಿಗಳಿಂದ ಹೊರಗುಳಿದಿದ್ದರು. ಇದೀಗ ಐರ್ಲೆಂಡ್ ಸರಣಿ ಮೂಲಕ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಬುಮ್ರಾ ಜೊತೆಗೆ ಪ್ರಸಿದ್ಧ್ ಕೃಷ್ಣ ಕೂಡ ತಂಡ ಸೇರಿಕೊಂಡಿದ್ದಾರೆ. ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಇವರಿಬ್ಬರ ಆಗಮನ ಭಾರತಕ್ಕೆ ಪ್ಲಸ್ ಪಾಯಿಂಟ್.
ಯುವ ಆಟಗಾರರ ಮೇಲೆ ನಿರೀಕ್ಷೆ:
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಕೊಹ್ಲಿ, ರೋಹಿತ್ರಂತಹ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪುರುಷರ ಕ್ರಿಕೆಟ್ ತಂಡವನ್ನು ಮುನ್ನಡೆಸಲಿರುವ ರುತುರಾಜ್ ಗಾಯಕ್ವಾಡ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಚೊಚ್ಚಲ ಕೆರಿಬಿಯನ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಹೆಸರಿಸಲಾಗಿದ್ದು, ಜಿತೇಶ್ ಶರ್ಮಾ ಅವರನ್ನು ಬ್ಯಾಕಪ್ ಆಗಿ ಸೇರಿಸಲಾಗಿದೆ. ಇನ್ನು ಫೆಬ್ರವರಿ 2022 ರಲ್ಲಿ ಭಾರತ ಪರ ಕೊನೆಯ ಬಾರಿಗೆ ಟಿ20 ಪಂದ್ಯ ಆಡಿದ್ದ ಶಿವಂ ದುಬೆ ಅವರೊಂದಿಗೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇತ್ತ ಐರ್ಲೆಂಡ್ ತಂಡ ಕೂಡ ಬಲಿಷ್ಠವಾಗಿದೆ. ಸ್ಟಾರ್ ಓಪನರ್ ಪಾಲ್ ಸ್ಟರ್ಲಿಂಗ್ಗೆ ನಾಯಕತ್ವ ನೀಡಲಾಗಿದೆ. ಮಣಿಕಟ್ಟಿನ ಗಾಯದಿಂದ ಕಳೆದ ಎರಡು ತಿಂಗಳಿಂದ ತಂಡದಿಂದ ಹೊರಗುಳಿದಿದ್ದ ಆಲ್ರೌಂಡರ್ ಗರೆಥ್ ಡೆಲಾನಿ ತಂಡಕ್ಕೆ ಮರಳಿದ್ದಾರೆ. ಅದೇ ಸಮಯದಲ್ಲಿ, ಕೇವಲ 10 ಟಿ20 ಪಂದ್ಯಗಳನ್ನು ಆಡಿರುವ ಮಧ್ಯಮ ವೇಗಿ-ಆಲ್-ರೌಂಡರ್ ಫಿಯಾನ್ ಹ್ಯಾಂಡ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಆಂಡ್ರ್ಯೂ ಬಾಲ್ಬಿರ್ನಿ, ರಾಸ್ ಅಡೇರ್, ಲೋರ್ಕನ್ ಟಕರ್, ಬ್ಯಾರಿ ಮೆಕಾರ್ಥಿ, ಥಿಯೋ ವ್ಯಾನ್ ವೀರ್‌ಕಾಮ್, ಬೆನ್ ವೈಟ್, ಕ್ರೇಗ್ ಯುಂಗ್ ತಂಡದಲ್ಲಿದ್ದಾರೆ.
ಪಂದ್ಯ ಎಷ್ಟು ಗಂಟೆಗೆ?-ನೇರಪ್ರಸಾರ:
ಭಾರತೀಯ ಕಾಲಮಾನದ ಪ್ರಕಾರ ಭಾರತ ಹಾಗೂ ಐರ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಇದರ ನೇರ ಪ್ರಸಾರದ ಹಕ್ಕು ವಯಾಕಾಮ್ 18 ಪಾಲಾಗಿದ್ದು ಸ್ಪೋರ್ಟ್ 18ನಲ್ಲಿ ಲೈವ್ ವೀಕ್ಷಿಸಬಹುದು. ಡಿಡಿ ಸ್ಪೋರ್ಟ್ಸ್ನಲ್ಲಿ ಕೂಡ ನೇರಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಇರಲಿದೆ.
ಭಾರತ ತಂಡ: ಜಸ್ಪ್ರಿತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ರಾಸ್ ಅಡೇರ್, ಲೋರ್ಕನ್ ಟಕರ್, ಹ್ಯಾರಿ ಟ್ಯಾಕ್ಟರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಥಿಯೋ ವ್ಯಾನ್ ವೀರ್‌ಕಾಮ್, ಬೆನ್ ವೈಟ್, ಕ್ರೇಗ್ ಯುಂಗ್.