21 ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ; ಟಿ20ಯಲ್ಲಿ ಸಂಜು ಬ್ಯಾಟ್ ಫುಲ್ ಸೈಲೆಂಟ್

ಸಾಕಷ್ಟು ಪರ ವಿರೋಧಗಳ ನಡುವೆ ಕೊನೆಗೂ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿ (India vs West Indies) ಸತತ ಅವಕಾಶ ಪಡೆಯುವಲ್ಲಿ ಯಶಸ್ವಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌  Sanju Samson ಇಡೀ ಪ್ರವಾಸದಲ್ಲಿ ಆಯ್ಕೆ ಮಂಡಳಿಯ ಗಮನ ಸೆಳೆಯುವಲ್ಲಿ ವಿಫಲರಾದರು. ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಸಂಜು, ಟಿ20 ಸರಣಿಯಲ್ಲಿ ಹೇಳ ಹೆಸರಿಲ್ಲದಂತ್ತಾದರು. ಈ ಮೂಲಕ ಚುಟುಕು ಮಾದರಿಯಲ್ಲಿ ಸಂಜು ಭವಿಷ್ಯ ಅಂತಂತ್ರ ಸ್ಥಿತಿಯಲ್ಲಿದೆ ಎಂಬುದು ಮತ್ತೊಮ್ಮೆ ಸಾಭೀತಾಯಿತು. ಸಂಜು ಈ ಸರಣಿಯಲ್ಲಿ ಮಾತ್ರವಲ್ಲ ಈ ಹಿಂದೆ ನಡೆದ ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಿಂಬಾಬ್ವೆ ವಿರುದ್ಧವೂ ಸತತ ವೈಫಲ್ಯ ಅನುಭವಿಸಿದ್ದರು.

ಟಿ20ಯಲ್ಲಿ ಆಡಿದ ಮೊದಲ ಪಂದ್ಯದಿಂದ ಇಲ್ಲಿಯವರೆಗೆ ಸಂಜು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. 2015 ರಲ್ಲಿ ಜಿಂಬಾಬ್ವೆ ವಿರುದ್ಧ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಂಜು ಅಂದಿನಿಂದ ಈ ಮಾದರಿಯಲ್ಲಿ 21 ಪಂದ್ಯಗಳನ್ನು ಆಡಿದ್ದಾರೆ. ಈ 21 ಪಂದ್ಯಗಳ 18 ಇನ್ನಿಂಗ್ಸ್‌ಗಳಲ್ಲಿ ಅವರು ಒಮ್ಮೆ ಮಾತ್ರ 50 ರನ್ ಗಡಿ ದಾಟಿರುವುದು ಅವರ ಕಳಪೆ ಬ್ಯಾಟಿಂಗ್​ಗೆ ಕೈಗನ್ನಡಿಯಾಗಿದೆ.

18 ಇನ್ನಿಂಗ್ಸ್‌ಗಳಲ್ಲಿ 320 ರನ್

ಸ್ಯಾಮ್ಸನ್ ಇದುವರೆಗೆ ಆಡಿರುವ 18 ಇನ್ನಿಂಗ್ಸ್‌ಗಳಲ್ಲಿ 18.82 ಸರಾಸರಿಯಲ್ಲಿ 320 ರನ್ ಕಲೆಹಾಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಆಡುವ ಅವಕಾಶ ಸ್ಯಾಮ್ಸನ್‌ಗೆ ಸಿಕ್ಕಿತು. ಆದರೆ ಒಂದೇ ಒಂದು ಪಂದ್ಯದಲ್ಲೂ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಈ ಟಿ20 ಸರಣಿಯ 3 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಂಜು ಕ್ರಮವಾಗಿ 12,7,13 ರನ್ ಬಾರಿಸಿದರು. ಈ ವರ್ಷ, ಅವರು ಇಲ್ಲಿಯವರೆಗೆ 6 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರ ದೊಡ್ಡ ಇನ್ನಿಂಗ್ಸ್​ ಎಂದರೆ ಕೇವಲ 13 ರನ್.

ಐರ್ಲೆಂಡ್ ವಿರುದ್ಧ ಅರ್ಧಶತಕ

ಈ ಹಿಂದೆ 2022ರಲ್ಲಿಯೂ ಅವರು ಟೀಂ ಇಂಡಿಯಾ ಪರ 6 ಟಿ20 ಪಂದ್ಯಗಳನ್ನು ಆಡಿದ್ದರು. ಐರ್ಲೆಂಡ್ ವಿರುದ್ಧ 77 ರನ್ ಬಾರಿಸಿದ್ದು, ಅವರ ಟಿ20 ವೃತ್ತಿ ಜೀವದನ ಅತ್ಯಧಿಕ ರನ್ ಆಯಿತು. ಟಿ20 ತಂಡಕ್ಕೆ ವಾಪಸಾದ ಬಳಿಕ ಸತತ ಅವಕಾಶಗಳನ್ನು ಪಡೆಯುತ್ತಿದ್ದರೂ ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಂಜುಗೆ ಸಾಧ್ಯವಾಗಲಿಲ್ಲ. 2015 ರಲ್ಲಿ ಪಾದಾರ್ಪಣೆ ಮಾಡಿದ ನಂತರ, ಅವರು ಸುಮಾರು 5 ವರ್ಷಗಳ ಕಾಲ ತಂಡದಿಂದ ಹೊರಗಿದ್ದರು.

ಆ ಬಳಿಕ 2020 ರಲ್ಲಿ ತಂಡಕ್ಕೆ ಮರಳಿದ ಸಂಜು ಆ ವರ್ಷ ಆಡಿದ 6 ಪಂದ್ಯಗಳಲ್ಲಿ 23 ರನ್ ಬಾರಿಸಲಷ್ಟೇ ಶಕ್ತರಾದರು. ಇನ್ನು 2021 ರಲ್ಲಿ, 3 ಪಂದ್ಯಗಳನ್ನು ಆಡಿದ್ದ ಸ್ಯಾಮ್ಸನ್, ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಇದರ ಹೊರತಾಗಿಯೂ, ಸಂಜುಗೆ ಅವಕಾಶಗಳನ್ನು ನೀಡಲಾಗುತ್ತಿದೆ. ಆದರೆ ಸಂಜು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ತಂಡದಿಂದ ಹಂತ ಹಂತವಾಗಿ ದೂರಾಗುತ್ತಿದ್ದಾರೆ.