ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿ ಭಾರಿ ಬೆಂಕಿ ಅವಗಢ ಸಂಭವಿಸಿದ್ದು, 10ಕ್ಕೂ ಅಧಿಕ ಮಂದಿಗೆ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರಾದರೂ, ಘಟನಾ ಸ್ಥಳಕ್ಕೆ ಅರ್ಧಗಂಟೆಯ ಬಳಿಕ ಅವರು ಆಗಮಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಣ ನಿಯಂತ್ರಣ ವಿಭಾಗದ ಕಚೇರಿಯಲ್ಲಿ ಬೆಂಕಿ ಅವಗಢ ಸಂಭವಿಸಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಎಲ್ಲ ನೌಕರರಿಗೂ ಸುಟ್ಟು ಗಾಯಗಳಾಗಿದ್ದು, ಬೆಂಕಿ ಅವಗಢ ಸಂಭವಿಸಿದ ಬೆನ್ನಲ್ಲಿಯೇ ಬಿಬಿಎಂಪಿ ಆಯುಕ್ತರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಸಿಬ್ಬಂದಿಗಳನ್ನು ಅಧಿಕಾರಿಗಳು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪೊಲೀಸ್ ವಾಹನದಲ್ಲಿ ಎಲ್ಲರನ್ನೂ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆಯಲ್ಲಿ ಚೀಫ್ ಇಂಜಿನಿಯರ್ ಶಿವಕುಮಾರ್ ಅವರಿಗೂ ಗಾಯಗಳಾಗಿವೆ. ಕೂಗಳತೆ ದೂರದಲ್ಲಿ ಅಗ್ನಿಶಾಮಕ ದಳದ ಕಚೇರಿ ಇದ್ದರೂ, ಘಟನಾ ಸ್ಥಳಕ್ಕೆ ಬರಲು ಅರ್ಧಗಂಟೆ ತೆಗೆದುಕೊಂಡಿದ್ದಾರೆ
ಗುತ್ತಿಗೆದಾರರ ಕಮೀಷನ್ ಆರೋಪ ಮಾಡಿರುವ ಬೆನ್ನಲ್ಲಿಯೇ ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಅದಲ್ಲದೆ, ಸರ್ಕಾರ ಕೂಡ ಹಳೆಯ ಬಿಬಿಎಂಪಿ ಕಾಮಗಾರಿಗಳ ತನಿಖೆ ಆದೇಶ ನೀಡಿತ್ತು. ಅದರ ನಡುವೆಯೇ ಕಚೇರಿಗೆ ಬೆಂಕಿ ಬಿದ್ದಿರುವುದು ಅನುಮಾನಕ್ಕೆ ಎಡೆ ಮಾಡಿದೆ. ರಸ್ತೆ ಡಾಂಬಾರು ಗುಣನಿಯಂತ್ರಣದಲ್ಲಿ ಇರಿಸಿದ್ದ ರಾಸಾಯನಿಕ ಸ್ಫೋಟದಿಂದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ನಡುವೆ ಬಿಬಿಎಂಪಿ ಕಚೇರಿಯ ಪ್ರಮುಖ ದಾಖಲೆಗಳಿಗೂ ಬೆಂಕಿ ಬಿದ್ದಿದೆಯೇ ಎನ್ನುವ ಅನುಮಾನ ಎದುರಾಗಿದೆ.
ಬೆಂಕಿ ಹೊತ್ತಿಕೊಂಡ ಕೂಡಲೇ ಹಲವರು ಹೊರಗಡೆ ಓಡಿಹೋಗಿದ್ದಾರೆ. ಆದರೆ, ಕಚೇರಿಯಲ್ಲೇ ಸಿಕ್ಕಿಹಾಕಿಕೊಂಡ ವ್ಯಕ್ತಿಗಳ ಮುಖ, ಕೈ-ಕಾಲು, ದೇಹದ ಭಾಗಗಳು ಸುಟ್ಟು ಹೋಗಿವೆ.
ಮೂರು ಓವನ್‌ಗಳ ಪೈಕಿ ಒಂದು ಬ್ಲಾಸ್ಟ್ ಆಗಿದ್ದರಿಂದ ಘಟನೆ ಸಂಭವಿಸಿದೆ. ಕೆಮಿಕಲ್ ಟೆಸ್ಟ್ ವೇಳೆ ಓವನ್ ಸ್ಪೋಟಗೊಂಡಿದೆ ಎಂದು ಪೂರ್ವ ವಿಭಾಗದ ಸಹಾಯಕ ಕಮೀಷನರ್ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಇನ್ನು ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಗಾಯಾಳುಗಳನ್ನು ಸಾಗಿಸಲು ಯಾವುದೇ ಅಂಬ್ಯುಲೆನ್ಸ್‌ಗಳು ಬಂದಿಲ್ಲ. ಗಾಯಾಳುಗಳಿಗೆ ಸೂಕ್ತ ಪ್ರಥಮ ಚಿಕಿತ್ಸಾ ಸೌಲಭ್ಯಗಳೂ ಬಿಬಿಎಂಪಿಯಲ್ಲಿ ಇದ್ದಿರಲಿಲ್ಲ ಎಂದು ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.10 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ: ಗಾಯಾಳುಗಳನ್ನು ಪೊಲೀಸ್ ವಾಹನದಲ್ಲಿ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 10 ಮಂದಿ ಗಾಯಾಳುವಾಗಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ. ಸದ್ಯ ಕಚೇರಿಯ ಬೆಂಕಿಯನ್ನು ಸಿಬ್ಬಂದಿ ಆರಿಸುತ್ತಿದ್ದಾರೆ .’ಬಿಬಿಎಂಪಿ ಕಚೇರಿಯ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಲಯದಲ್ಲಿ ಕಾಮಗಾರಿಗಳ ದಾಖಲೆ ಇದ್ದಂತಹ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ. 40% ಕಮಿಷನ್ನಿನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು, ಇದರ ಹಿಂದಿರುವ ಬಿಜೆಪಿಯ ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ. ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿಬಿಡುವ ಹುನ್ನಾರ ನಡೆಸಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.