ಅಲ್ಲು ಅರ್ಜುನ್ (Allu Arjun) ಅವರು ಟಾಲಿವುಡ್ನ ಬೇಡಿಕೆಯ ನಟ ಕುಟುಂಬಕ್ಕೂ,ಅಲ್ಲು ಅರ್ಜುನ್ ಚಿರಂಜೀವಿ ಕುಟುಂಬಕ್ಕೂ ನಿಕಟ ಸಂಬಂಧ ಇದೆ. ಇವರ ಫ್ಯಾಮಿಲಿ ತುಂಬಾನೇ ದೊಡ್ಡದು. ಚಿತ್ರರಂಗಕ್ಕೆ ಇವರು ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಹಾಗಾದರೆ, ಚಿತ್ರರಂಗದಲ್ಲಿ ಇವರ ಕುಟುಂಬದ ಯಾರೆಲ್ಲ ಆ್ಯಕ್ಟೀವ್ ಆಗಿದ್ದಾರೆ? ಈ ಫ್ಯಾಮಿಲಿಯ ಸದಸ್ಯರ ಪರಿಚಯ ನಿಮಗೆ ಮಾಡಿಕೊಡುತ್ತಿದ್ದೇವೆ.ಅಲ್ಲು ರಾಮಲಿಂಗಯ್ಯ: ಅಲ್ಲು ಅರ್ಜುನ್ ತಾತ ಅಲ್ಲು ರಾಮಲಿಂಗಯ್ಯ ಟಾಲಿವುಡ್ನಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ 1990ರಲ್ಲಿ ಪದ್ಮಶ್ರೀ ಮತ್ತು 2001ರಲ್ಲಿ ರಘುಪತಿ ವೆಂಕಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅವರು ಪ್ರಸಿದ್ಧ ನಟ ಮತ್ತು ಹಾಸ್ಯನಟರಾಗಿದ್ದರು. ಅವರ ಮಕ್ಕಳ ಪೈಕಿ ಅಲ್ಲು ಅರವಿಂದ್ ಮತ್ತು ಸುರೇಖಾ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರದ್ದು ದಕ್ಷಿಣದಲ್ಲಿ ದೊಡ್ಡ ಹೆಸರು. ಅವರು ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.ಅಲ್ಲು ಅರವಿಂದ್: ಅಲ್ಲು ಅರವಿಂದ್ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಗೀತಾ ಆರ್ಟ್ಸ್ ಮೂಲಕ ಸಾಕಷ್ಟು ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ. ‘ಅಲಾ ವೈಕುಂಟಪುರಮುಲೋ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಇವರಿಗೆ ಇದೆ. ಕನ್ನಡದ ‘ಸುಂದರಾಂಗ ಜಾಣ’ (2016), ‘ಮಾಂಗಲ್ಯಂ ತಂತುನಾನೇನ’ (1998) ಚಿತ್ರಗಳನ್ನು ಅವರು ನಿರ್ಮಿಸಿದ್ದರು. ಅಲ್ಲು ನಿರ್ಮಲಾ ಇವರ ಪತ್ನಿ. ಅಲ್ಲು ವೆಂಕಟೇಶ್, ಅಲ್ಲು ಅರ್ಜುನ್, ಅಲ್ಲು ಸಿರಿಶ್ ಹೆಸರಿನ ಪುತ್ರರಿದ್ದಾರೆ.ಅಲ್ಲು ಅರ್ಜುನ್: ಅಲ್ಲು ಅರ್ಜುನ್ ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸದ್ಯ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲು ಅರ್ಜುನ್ 2011ರಲ್ಲಿ ಸ್ನೇಹಾ ರೆಡ್ಡಿ ಅವರನ್ನು ವಿವಾಹವಾದರು. ಇವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳ ಹೆಸರು ಅರ್ಹ ಮತ್ತು ಮಗನ ಹೆಸರು ಅಯಾನ್.ಅಲ್ಲು ಶಿರೀಶ್: ಅಲ್ಲು ಶಿರೀಶ್ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೆಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಆದರೆ ಅಲ್ಲು ಅರ್ಜುನ್ ಅವರಷ್ಟು ಫ್ಯಾನ್ ಫಾಲೋಯಿಂಗ್ ಇವರಿಗೆ ಇಲ್ಲ. 2013ರಲ್ಲಿ ತೆರೆಕಂಡ ‘ಗೌರವಂ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.