ಶ್ರೇಯಸ್ ಅಯ್ಯರ್​ ಕಂಬ್ಯಾಕ್ ಬಗ್ಗೆ ಮಾಹಿತಿ ನೀಡಿದ ರೋಹಿತ್ ಶರ್ಮಾ

ಏಷ್ಯಾಕಪ್​ಗೆ ಕೌಂಟ್ ಡೌನ್ ಶುರುವಾಗಿದೆ. ಆಗಸ್ಟ್ 30 ರಿಂದ ಶುರುವಾಗಲಿರುವ ಟೂರ್ನಿಯು ಸೆಪ್ಟೆಂಬರ್ 17 ಕ್ಕೆ ಮುಗಿಯಲಿದೆ. ಇದರ ಬೆನ್ನಲ್ಲೇ ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಈ ಎರಡು ಟೂರ್ನಿಗಳಿಗಾಗಿ ಬಲಿಷ್ಠ ತಂಡವನ್ನು ರೂಪಿಸುವ ಇರಾದೆಯಲ್ಲಿದೆ ಬಿಸಿಸಿಐ. ಆದರೆ ಅದಕ್ಕೂ ಮುನ್ನ ಕೆಲ ಆಟಗಾರರು ತಮ್ಮ ಫಿಟ್​ನೆಸ್ ಸಾಬೀತುಪಡಿಸಬೇಕಾದ ಅವಶ್ಯತೆಯಿದೆ. ಇವರಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ಬರು. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಅಯ್ಯರ್ ಮುಂಬರುವ ಟೂರ್ನಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಪ್ರಶ್ನೆ

ಈ ಪ್ರಶ್ನೆಗೆ ಇದೀಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಹಿಟ್​ಮ್ಯಾನ್, ಶ್ರೇಯಸ್ ಅಯ್ಯರ್ ಅವರು ಸಂಪೂರ್ಣ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮುಂಬರುವ ಏಕದಿನ ವಿಶ್ವಕಪ್‌ಗೆ ಲಭ್ಯರಾಗುವ ಭರವಸೆ ಇದೆ ಎಂದಿದ್ದಾರೆ.

ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್‌ನೆಸ್‌ನ ಹಾದಿಯಲ್ಲಿದ್ದಾರೆ. ಏಕದಿನ ವಿಶ್ವಕಪ್ ವೇಳೆಗೆ ಅವರು ತಂಡಕ್ಕೆ ಮರಳುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್​ಗೂ ಮುನ್ನ ಅಯ್ಯರ್ ಕಂಬ್ಯಾಕ್ ಮಾಡುವುದು ಖಚಿತ ಎನ್ನಬಹುದು.

ಇತ್ತ ಏಷ್ಯಾಕಪ್ ಆರಂಭಕ್ಕೂ ಮುನ್ನ ನಡೆಯಲಿರುವ ಶಿಬಿರಕ್ಕೂ ಶ್ರೇಯಸ್ ಅಯ್ಯರ್ ಅವರಿಗೆ ಬುಲಾವ್ ಹೋಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಏಷ್ಯಾಕಪ್ ಅಥವಾ ಏಕದಿನ ವಿಶ್ವಕಪ್​ನಲ್ಲಿ ಶ್ರೇಯಸ್ ಅಯ್ಯರ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಅಭ್ಯಾಸ ಆರಂಭಿಸಿದ ಅಯ್ಯರ್:

ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ನೆಟ್ಸ್ ಅಭ್ಯಾಸ ಆರಂಭಿಸಿದ್ದಾರೆ. ಅಲ್ಲದೆ ಇದೀಗ ಫಿಟ್​ನೆಸ್ ಸಾಧಿಸಿರುವ ಅಯ್ಯರ್ ಮುಂಬರುವ ಏಷ್ಯಾಕಪ್​ನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಯ್ಯರ್ ಅವರು ಏಷ್ಯಾಕಪ್​ಗೂ ಮುನ್ನ ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಅವರನ್ನು ಆಯ್ಕೆ ಮಾಡಲಾಗುತ್ತದೆ. ಒಂದು ವೇಳೆ ಏಷ್ಯಾಕಪ್ ತಂಡದಲ್ಲಿ ಅವರು ಕಾಣಿಸಿಕೊಳ್ಳದಿದ್ದರೂ ಏಕದಿನ ವಿಶ್ವಕಪ್​ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಅಯ್ಯರ್-ಕೆಎಲ್​ಆರ್​ಗೆ ಫಿಟ್​ನೆಸ್ ಟೆಸ್ಟ್:

ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಇಬ್ಬರು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಪಂದ್ಯಕ್ಕಾಗಿ ಬೇಕಿರುವ ಶೇ.100 ರಷ್ಟು ಫಿಟ್​ನೆಸ್ ಹೊಂದಿಲ್ಲ. ಹೀಗಾಗಿ ಇಬ್ಬರು ಆಟಗಾರರ ಫಿಟ್​ನೆಸ್​ ವರದಿಗಾಗಿ ಮಂಡಳಿಯು ಕಾಯುತ್ತಿದೆ. ಒಂದು ವೇಳೆ ಇನ್ನೆರಡು ವಾರಗಳಲ್ಲಿ ಇಬ್ಬರು ಸಂಪೂರ್ಣ ಫಿಟ್​ನೆಸ್ ಸಾಧಿಸಲಿದ್ದಾರೆ ಎಂದು ಕಂಡು ಬಂದರೆ, ಏಷ್ಯಾಕಪ್​ನಲ್ಲಿ ಇಬ್ಬರಿಗೂ ಮಣೆ ಹಾಕಲಾಗುತ್ತದೆ. ಹೀಗಾಗಿಯೇ ಈ ವರದಿ ಬಂದ ಬಳಿಕವಷ್ಟೇ ಏಷ್ಯಾಕಪ್‌ಗೆ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ.