ಕೋಲಾರ, ಜುಲೈ 30: ರಾಜ್ಯದಲ್ಲಿ ಟೊಮೆಟೊ ಬೆಲೆ ಆಕಾಶ ಮುಟ್ಟಿದ್ದು ಟೊಮೆಟೊ ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ಅನೇಕ ರೈತರು ತಮ್ಮ ಜಮೀನಿಗೆ ಕಾವಲುಗಾರರನ್ನು ನೇಮಿಸಿದ್ದಾರೆ. ಸಿಸಿಟಿವಿಗಳನ್ನು ಅಳವಡಿಸಿ ಟೊಮೆಟೊ ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ. ಆದ್ರೆ ಕೋಲಾರದಲ್ಲಿ ಟೊಮೆಟೊ ತುಂಬಿದ ಲಾರಿ ಕಳ್ಳತನವಾಗಿದ್ದು ರೈತ ಕಂಗಾಲಾಗಿದ್ದಾನೆ.
ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮೆಟೊ ತುಂಬಿದ್ದ ಲಾರಿ ನಾಪತ್ತೆಯಾಗಿದೆ. ಕೋಲಾರದ ಮೆಹತ್ ಟ್ರಾನ್ಸ್ಪೋರ್ಟ್ಗೆ ಸೇರಿದ ಲಾರಿ ಇದಾಗಿದ್ದು ಇದರಿಲ್ಲಿ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮೆಟೊಗಳಿದ್ದವು. ಲಾರಿ ಚಾಲಕ ಮೊಬೈಕ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಇನ್ನು ಟೊಮೆಟೊ ಬೆಲೆ ಏರಿಕೆಯಾಗಿದ್ದು ಕಳ್ಳರು ಕೆಂಪು ರಾಣಿ ಕದಿಯಲು ಹೊಂಚುಹಾಕುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯ INR ಮಂಡಿಯಲ್ಲಿ ಟೊಮೆಟೊ ಕದಿಯುವ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ರಾತ್ರಿ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳ್ಳ ತನ್ನ ಕರಾಮತ್ತು ತೋರಿಸಿದ್ದಾನೆ. ಸುತ್ತಮುತ್ತ ನೋಡಿ ಒಂದು ಬಾಕ್ಸ್ ಟೊಮೆಟೊ ಎಗರಿಸಿದ್ದಾನೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.