ಪಾಸ್​​ಪೋರ್ಟ್, ವೀಸಾ ದಾಖಲೆಗಳಿಲ್ಲದೆ ಪಾಕಿಸ್ತಾನದಲ್ಲಿರುವ ಪ್ರಿಯಕರನ ಭೇಟಿಗಾಗಿ ಹೊರಟ ಬಾಲಕಿ ಜೈಪುರದಲ್ಲಿ ಪೊಲೀಸರ ವಶಕ್ಕೆ

ಸಿಕಾರ್ ಜುಲೈ 29: Rajasthan ಸಿಕಾರ್ ಜಿಲ್ಲೆಯ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪೊಲೀಸರು ಶುಕ್ರವಾರ ಜೈಪುರ ವಿಮಾನ ನಿಲ್ದಾಣದಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ತನ್ನ ಪ್ರೇಮಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗುವುದಾಗಿ ಈಕೆ ಹೇಳಿದ್ದು, ಅವಳಲ್ಲಿ ಯಾವುದೇ ಪಾಸ್‌ಪೋರ್ಟ್, ವೀಸಾ ಅಥವಾ ಪ್ರಯಾಣದ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ಜೈಪುರ ವಿಮಾನ ನಿಲ್ದಾಣದ ಅಧಿಕಾರಿಗಳು ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈಕೆಯನ್ನು ಹೆತ್ತವರ ಮುಂದೆ ಕರೆ ತಂದಾಗ ಗಮನ ಸೆಳೆಯಲು ನಾನು ಇಷ್ಟೆಲ್ಲಾ ಮಾಡಿದ್ದೇನೆ ಎಂದು ಹೇಳಿದ್ದಾಳೆ.

ನಿನ್ನೆ ಜೈಪುರ ವಿಮಾನ ನಿಲ್ದಾಣದಲ್ಲಿ ಅಪ್ರಾಪ್ತೆಯನ್ನು ಬಂಧಿಸಲಾಗಿತ್ತು. ಆಕೆ ತನ್ನ ಪ್ರಿಯಕರನನ್ನು ಭೇಟಿಯಾಗಲು ಲಾಹೋರ್‌ಗೆ ಹೋಗಲು ಬಯಸಿದ್ದಳು ಎಂದು ತಿಳಿದುಬಂದಿದೆ. ಈಕೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್‌ಗೆ ತಲುಪಿ ಪಾಕಿಸ್ತಾನಕ್ಕೆ ಟಿಕೆಟ್ ಕೇಳಿದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಹುಡುಗಿ ಅಪ್ರಾಪ್ತ ವಯಸ್ಸಿನವಳಾಗಿದ್ದಳು, ಟಿಕೆಟ್ ಮಾಸ್ಟರ್ ಮತ್ತು ಸೆಕ್ಯುರಿಟಿ ಗಾರ್ಡ್ ಅವಳು ತಮಾಷೆ ಮಾಡುತ್ತಿದ್ದಾಳೆ ಎಂದು ಭಾವಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಹೇಗೆ ವ್ಯವಹರಿಸಬೇಕು ಮತ್ತು ವಿಚಾರಣೆಯ ಸಮಯದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳನ್ನು ಪಾಕಿಸ್ತಾನಿ ಹುಡುಗನು ತನಗೆ ತಿಳಿಸಿದ್ದಾಗಿ ಬಾಲಕಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ.

ಬಾಲಕಿ ತಾನು ಇಸ್ಲಾಮಾಬಾದ್‌ನಿಂದ ಮೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದೇನೆ. ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದೇನೆ.. ಈಗ ಅವರು ಚೆನ್ನಾಗಿ ಹೊಂದಿಕೊಳ್ಳದ ಕಾರಣ, ತಾನು ಪಾಕಿಸ್ತಾನಕ್ಕೆ ಮರಳಲು ಬಯಸುತ್ತಾರೆ ಎಂದು ಸುಳ್ಳುಕತೆ ಹೆಣೆದಿದ್ದಳು. ಬಾಲಕಿಯ ಮಾತುಗಳನ್ನು ಕೇಳಿದ ಭದ್ರತಾ ಸಿಬ್ಬಂದಿಗೆ ಇದರಲ್ಲೇನೋ ಸಮಸ್ಯೆ ಇದೆ ಎಂದು ಸಂಶಯ ಮೂಡಿದೆ. ತನಿಖೆಯ ಸಮಯದಲ್ಲಿ ಆಕೆ ತಾನು ರಾಜಸ್ಥಾನದ ಸಿಕಾರ್ ಜಿಲ್ಲೆಯ ರತನ್‌ಪುರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದ್ದಾರೆ.