Pawan Kalyan ಸಕ್ರಿಯ ರಾಜಕೀಯಕ್ಕೆ ಬಂದು ಆಡಳಿತ ಪಕ್ಷದ ಮೇಲೆ ಸತತ ವಾಗ್ದಾಳಿ ಮಾಡುತ್ತಿರುವ ಕಾರಣ ಅಭಿಮಾನಿಗಳ ಜೊತೆಗೆ ವಿರೋಧಿಗಳನ್ನು ಪವನ್ ಸೃಷ್ಟಿಸಿಕೊಂಡಿದ್ದಾರೆ. ಅವರ ಸಿನಿಮಾಗಳ ಹವಾ ಮೊದಲಿನಂತಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಹೆಚ್ಚಾದ ಬಳಿಕವಂತೂ ಅವರ ಸ್ಟಾರ್ಡಮ್ ಕಡಿಮೆ ಆಗಿದೆ ಇತ್ಯಾದಿ ಮಾತುಗಳು ಕೇಳಿ ಬರುತ್ತಿದ್ದವು. ಇದರ ನಡುವೆಯೇ ಬಿಡುಗಡೆ ಆಗಿರುವ ಪವನ್ ನಟಿಸಿರುವ Bro ಸಿನಿಮಾ ಮೇಲಿನ ಎಲ್ಲ ಮಾತುಗಳನ್ನು ಸುಳ್ಳಾಗಿಸಿದ್ದು, ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ.
‘ಬ್ರೋ’ ಸಿನಿಮಾದಲ್ಲಿ ಸಾಯಿ ಧರಮ್ ತೇಜ್ ಹಾಗೂ ಪವನ್ ಕಲ್ಯಾಣ್ ಒಟ್ಟಾಗಿ ನಟಿಸಿದ್ದು, ಪವನ್ ಕಲ್ಯಾಣ್ರದ್ದು ಒಂದು ರೀತಿ ಎಕ್ಸ್ಟೆಂಡೆಡ್ ಅತಿಥಿ ಪಾತ್ರವಾಗಿದೆ. ಹಾಗಿದ್ದರೂ ಸಹ ಪವನ್ ಕಲ್ಯಾಣ್ ಇದ್ದಾರೆಂಬ ಕಾರಣಕ್ಕೆ ಮುಗಿಬಿದ್ದು ಜನ ಸಿನಿಮಾ ನೋಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆ ಆದ ಮೊದಲ ದಿನ ದಾಖಲೆಯ ಕಲೆಕ್ಷನ್ ಅನ್ನು ಮಾಡಿದೆ.
‘ಬ್ರೋ’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಭರ್ಜರಿ 30 ಕೋಟಿ ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಪವನ್ ಕಲ್ಯಾಣ್ರ ಸೋಲೋ ಸಿನಿಮಾ ಸಹ ಅಲ್ಲ. ನೆರೆ ರಾಜ್ಯಗಳ ಭಾಷೆಗೆ ಡಬ್ ಮಾಡದೆ ಕಡಿಮೆ ಚಿತ್ರಮಂದಿರಗಳಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ತಮಿಳು ಸಿನಿಮಾದ ರೀಮೇಕ್ ಸಿನಿಮಾ, ಇಷ್ಟೆಲ್ಲದರ ಮಧ್ಯೆ ಈ ಸಿನಿಮಾ ಮೊದಲ ದಿನ 30 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಇದು ಸಾಮಾನ್ಯ ಮೊತ್ತವೇನೂ ಅಲ್ಲ.
‘ಬೇಬಿ’ ಸಿನಿಮಾ ಉತ್ತಮ ಪ್ರದರ್ಶನವನ್ನು ತೆಲುಗು ರಾಜ್ಯಗಳಲ್ಲಿ ನೀಡುತ್ತಿರುವ ನಡುವೆಯೇ ‘ಬ್ರೋ’ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದರಲ್ಲಿ ಯಶಸ್ವಿಯಾಗಿದೆ. ಸಿನಿಮಾ ಮೊದಲ ದಿನ ಇಷ್ಟು ದೊಡ್ಡ ಮೊತ್ತ ಗಳಿಸುವಲ್ಲಿ ಪವನ್ ಕಲ್ಯಾಣ್ ಕ್ರೇಜ್ ಹೆಚ್ಚು ಕೆಲಸ ಮಾಡಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಸಾಯಿ ಧರಮ್ ತೇಜ್ಗೆ ಇಷ್ಟು ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವ ಶಕ್ತಿಯಿಲ್ಲ ಎಂಬುದು ಅವರ ಹಿಂದಿನ ಸಿನಿಮಾಗಳ ಕಲೆಕ್ಷನ್ ನೋಡಿದರೆ ತಿಳಿಯುತ್ತದೆ.
‘ಬ್ರೋ’ ಸಿನಿಮಾವು ತಮಿಳು ಸಿನಿಮಾದ ರೀಮೇಕ್ ಆಗಿದ್ದು, ಮೂಲ ಸಿನಿಮಾ ನಿರ್ದೇಶನ ಮಾಡಿರುವ ಸಮುದ್ರಕಿಣಿ ಅವರೇ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆದರೆ ಮೂಲ ಸಿನಿಮಾಕ್ಕೂ ತೆಲುಗಿನ ‘ಬ್ರೋ’ ಸಿನಿಮಾಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅದರಲ್ಲಿಯೂ ಪವನ್ ಪಾತ್ರವನ್ನು ಅಭಿಮಾನಿಗಳಿಗೆ ಇಷ್ಟವಾಗುವ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಪವನ್ರ ಹಳೆಯ ಸೂಪರ್ ಹಿಟ್ ಸಿನಿಮಾಗಳ ರೆಫರೆನ್ಸ್ಗಳನ್ನು ಢಾಳವಾಗಿ ‘ಬ್ರೋ’ ಸಿನಿಮಾದಲ್ಲಿ ಬಳಸಲಾಗಿದ್ದು, ಅಭಿಮಾನಿಗಳು ಶಿಳ್ಳೆ ಹೊಡೆಯುವಂತೆ ಮಾಡಲಾಗಿದೆ.