ದಾಂಡೇಲಿ : ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಕಾಡಾನೆಗಳ ದಾಳಿ ದಿನೆ ದಿನೇ ಹೆಚ್ಚಾಗತೊಡಗಿದ್ದು, ಸ್ಥಳೀಯ ರೈತರಲ್ಲಿ ಆತಂಕ ಮನೆ ಮಾಡಿದೆ. ಪ್ರತಿನ ಬಿಡದೇ ಕಾಡಾನೆಗಳು ಇಲ್ಲಿಯ ಕಬ್ಬು ಮತ್ತು ಭತ್ತದ ಗದ್ದೆಗಳಿಗೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡುತ್ತಿವೆ. ಬುಧವಾರವೂ ನಸುಕಿನ ವೇಳೆಯಲ್ಲಿ ಕಾಡಾನೆಗಳ ಹಿಂಡು ರೈತರ ಹೊಲ ಗದ್ದೆಗೆ ನುಗ್ಗಿ ಕೃಷಿ ಬೆಳೆಗಳನ್ನು ದ್ವಂಸ ಮಾಡಿವೆ.
ವರ್ಷದ ಹನ್ನೆರಡು ತಿಂಗಳು ಆನೆ ಸೇರಿದಂತೆ ವನ್ಯಪ್ರಾಣಿಗಳ ಹಾವಳಿ ಇಲ್ಲಿಯ ರೈತಾಪಿ ವರ್ಕಕ್ಕೆ ಇದ್ದು, ಬೆವರು ಸುರಿಸಿ ದುಡಿದ ಕೃಷಿ ಬೆಳೆ ವನ್ಯಪ್ರಾಣಿಗಳ ಪಾಲಾಗುತ್ತಿರುವುದರಿಂದ ಇಲ್ಲಿಯ ರೈತರು ಸಂಕಷ್ಟದ ಪರಿಸ್ಥಿಯನ್ನು ಅನುಭವಿಸುವಂತಾಗಿದೆ. ಕಳೆದ ಅನೇಕ ವರ್ಷಗಳಿಂದ ಕೃಷಿ ಚಟುವಟಿಕೆಯನ್ನು ನಡೆಸುತ್ತಾ ಬಂದಿದ್ದರೂ, ಇಲ್ಲಿ ಕೆಲ ರೈತರ ಕೃಷಿ ಭೂಮಿ ಅತಿಕ್ರಮಿಸಲ್ಪಟ್ಟ ಭೂಮಿ ಎಂಬ ಹಿನ್ನಲೆಯಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ಕೃಷಿ ಹಾನಿಗೊಳಗಾದ ರೈತರಿಗೆ ಅರಣ್ಯ ಇಲಾಖೆಯಿಂದ ಪರಿಹಾರವು ಸಿಗದಂತಾಗಿದೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ರಾಜ್ಯ ಸರಕಾರ ಸ್ಥಳೀಯ ರೈತರ ಬೆವರ ಹನಿಗೆ ಸೂಕ್ತ ರೀತಿಯಲ್ಲಿ ನ್ಯಾಯ ದೊರಕಿಸಿಕೊಡಬೇಕೆಂದು ಸ್ಥಳೀಯ ರೈತರಾದ ವಿಷ್ಣು ರಾಮಚಂದ್ರ ಪಾಟೀಲ್ ಅವರು ನಗರದಲ್ಲಿ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.