ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿಸಿ ನಾಲೆ ಪಲ್ಟಿಯಾಗಿದ್ದು, ಚಾಲಕ ನಾಪತ್ತೆಯಾಗಿರುವ ಘಟನೆ ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯಲ್ಲಿ ನಡೆದಿದೆ.
ನಾಪತ್ತೆಯಾಗಿರುವ ಕಾರು ಚಾಲಕ ಲೋಕೇಶ್‌ಗಾಗಿ ತೀವ್ರ ಶೋಧ ನಡೆದಿದೆ. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಸಿ ನಾಲೆಗೆ ಪಲ್ಟಿ ಹೊಡೆದಿದೆ. ಮಳೆಯಿಂದ ಹೆಚ್ಚಾಗಿ ನೀರು ತುಂಬಿದ್ದ ಕಾರಣ ಕಾರು ಸಂಪೂರ್ಣ ಮುಳುಗಡೆಯಾಗಿದೆ. ಕಾರಿನಲ್ಲಿದ್ದ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕ ನಾಪತ್ತೆಯಾಗಿದ್ದಾನೆ.
ಚಾಲಕ ಲೋಕೇಶ್ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದ್ದು ಕಾಲುವೆಯ ನೀರು ನಿಲ್ಲಿಸುವಂತೆ ಅಧಿಕಾರಿಗಳು ಸೂಚನೆ ನಿಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾಲುವೆಗೆ ಬಿದ್ದಿರುವ ಕಾರನ್ನ ಮೇಲೆತ್ತಲು ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2017ರಲ್ಲಿ ಕಾಲುವೆಗೆ ತಡೆಗೊಡೆ ಇಲ್ಲದೇ ದೊಡ್ಡ ಬಸ್ ದುರಂತ ನಡೆದಿತ್ತು. ಈ ಘಟನೆಯ ಬಳಿಕ ಕಾಲುವೆಯ ಉದ್ದಕ್ಕೂ ತಡೆಗೊಡೆ ನಿರ್ಮಿಸುವುದಾಗಿ ಹೇಳಿದ್ದ ಸರ್ಕಾರ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿ ಆಗಾಗ್ಗೆ ಅಪಘಾತಗಳು ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.