ಆನೇಕಲ್, ಜುಲೈ 27: ಅದು ಜನನಿಬಿಡ ಪ್ರದೇಶದಲ್ಲಿರುವ ನಿರ್ಮಾಣ ಹಂತದ ಕಟ್ಟಡ.. ಕಾರ್ಮಿಕರು ಎಂದಿನಂತೆ ಕೆಲಸ ಮಾಡ್ತಿರುವಾಗ ಗಬ್ಬು ವಾಸನೆ ಮೂಗಿಗೆ ಬಡಿಯೋಕೆ ಶುರುವಾಗಿತ್ತು.. ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ವಾಸನೆ ಬರ್ತಿದ್ದ ಜಾಗಕ್ಕೆ ಹೋಗಿ ಏನಾಗಿದೆ ಎಂದು ನೋಡಿದ್ದಾರೆ. ಆ ಘೋರ ದೃಶ್ಯ ಕಂಡು ಅಲ್ಲಿದ್ದ ಜನರೆಲ್ಲ ಭಯಭೀತರಾಗಿದ್ರು.. ಬೆಂಗಳೂರಿನ ಹೊರವಲಯದಲ್ಲಿ ನಡೆಯಿತೊಂದು ಭೀಕರ ಹತ್ಯೆ ಹೀಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ಅತ್ಯಂತ ಭೀಕರವಾಗಿ ಕೊಲೆಯಾಗಿರುವ ಅಪರಿಚಿತ ವ್ಯಕ್ತಿಯ ಮೃತದೇಹ.. ಇನ್ನೊಂದೆಡೆ ಸಾಕ್ಷ್ಯ ಕಲೆಹಾಕುತ್ತಿರುವ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಹಾಗೂ ಬೆರಳಚ್ಚು ತಜ್ಞರ ತಂಡ.. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಯಾರಂಡಹಳ್ಳಿ ಗ್ರಾಮದಲ್ಲಿ..
ಹೌದು ಗ್ರಾಮದ ಜನನಿಬಿಡ ಪ್ರದೇಶದಲ್ಲಿ ಅರ್ಧಕ್ಕೆ ನಿಂತಿದ್ದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಇಂದು ಮಧ್ಯಾಹ್ನ ದುರ್ವಾಸನೆಯೊಂದು ಬಂದಿದೆ. ಅಲ್ಲಿನ ಸುತ್ತಮುತ್ತಲಿನ ಜನರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅಲ್ಲಿಗೆ ಬಂದ ಪೋಲೀಸರು ನಿರ್ಮಾಣ ಹಂತದ ಕಟ್ಟಡದ ಒಳಗೆ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೈಮೇಲೆ ಬಟ್ಟೆ ಇಲ್ಲದೆ ಕೈಕಾಲು ಕಟ್ಟಿದ್ದ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಇನ್ನು, ಈ ಘಟನೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಡೆದಿದ್ದು, ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ, ದುಷ್ಕರ್ಮಿಗಳು ವ್ಯಕ್ತಿಯನ್ನ ಘೋರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಇಂಥದೊಂದು ಘಟನೆಯನ್ನ ಕಂಡ ಅಲ್ಲಿನ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.
ಬೊಮ್ಮಸಂದ್ರ- ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಸಮೀಪದಲ್ಲಿರುವ ಯಾರಂಡಹಳ್ಳಿ ಗ್ರಾಮದಲ್ಲಿ ಹೊರರಾಜ್ಯದ ಜನರೇ ಅತಿಹೆಚ್ಚಾಗಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಅರ್ಧಕ್ಕೆ ನಿಂತಿದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ಬಂದಿದ್ದ ಅಸಾಮಿಗಳು ಮದ್ಯದ ಪಾರ್ಟಿ ಮಾಡಿ ಬಳಿಕ ಕೊಲೆ ಮಾಡಿದ್ದಾರೆ.
ಅದಲ್ಲದೇ ವ್ಯಕ್ತಿಯನ್ನ ಸಂಪೂರ್ಣ ವಿವಸ್ತ್ರ ಗೊಳಿಸಿ ಕೈಕಾಲುಗಳನ್ನ ಕಟ್ಟಿಹಾಕಿ ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ ಮೃತ ದೇಹದ ಮೇಲೆ ಹಳೆಯ ಚಾಪೆಯೊಂದನ್ನ ಹೊದಿಸಿ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಅಲ್ಲಿನ ಸುತ್ತಮುತ್ತಲಿನ ಜನರಿಗೆ ದುರ್ವಾಸನೆ ಬಂದಾಗ ಕೂಡಲೇ ಸೂರ್ಯನಗರ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದು, ಸ್ಥಳಕ್ಕೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು, ಬೆರಳಚ್ಚು ತಜ್ಞರು, ಡಾಗ್ ಸ್ಕ್ವಾಡ್ ಭೇಟಿ ನೀಡಿ ಸಾಕ್ಷ್ಯ ಕಲೆಹಾಕಿದ್ದಾರೆ. ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಸೂರ್ಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಯಾದ ವ್ಯಕ್ತಿ ಯಾರೆಂದು ಪತ್ತೆ ಹಚ್ಚಿ, ಬಳಿಕ ಕೊಲೆ ಮಾಡಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.