ತೆಲುಗು ಸಿನಿಮಾ ರಂಗದ ಖ್ಯಾತ ನಟ ಚಿರಂಜೀವಿ ಮೊನ್ನೆಯಷ್ಟೇ ಪತ್ನಿಯೊಂದಿಗೆ ವಿಮಾನಯಾನ ಬೆಳೆಸಿದ್ದರು. ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೊಂದು ಖಾಸಗಿ ವಿಮಾನವಾಗಿದ್ದರಿಂದ ಅಲ್ಲಿನ ಕೆಲ ದೃಶ್ಯಗಳನ್ನು ಅವರು ಹಂಚಿಕೊಂಡು ಸಂಭ್ರಮಿಸಿದ್ದರು. ವಿರಾಮ ಬಯಸಿ ಅವರು ಪ್ರವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅಸಲಿ ಸುದ್ದಿ ಈಗ ಹೊರ ಬಂದಿದೆ.
ಮೆಗಾಸ್ಟಾರ್ ಚಿರಂಜೀವಿ ಪತ್ನಿಯೊಂದಿಗೆ ಪ್ರಯಾಣ ಬೆಳೆಸಿದ್ದು ಅಮೆರಿಕಾಗೆ ಎಂದು ಹೇಳಲಾಗುತ್ತಿದೆ. ಅಮೆರಿಕಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿರಂಜೀವಿ ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆಯಂತೆ. ಅದಕ್ಕಾಗಿ ಅವರು ಪತ್ನಿಯೊಂದಿಗೆ ಅಮೆರಿಕಾಗೆ ತೆರಳಿದ್ದರು ಎನ್ನುವುದು ಈಗ ಗೊತ್ತಾಗಿದೆ.
ಭೋಲಾ ಶಂಕರ್ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಅಮೆರಿಕಾಗೆ ಹಾರಿದ್ದರು ಚಿರಂಜೀವಿ. ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಪಡೆಯಲಾಗಿತ್ತು. ಸಣ್ಣದೊಂದು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಚಿರಂಜೀವಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರಂತೆ.
ಈವರೆಗೂ ಈ ವಿಷಯವನ್ನು ಗೌಪ್ಯವಾಗಿ ಇಡಲಾಗಿತ್ತು. ಆದರೆ, ಆಪ್ತರು ಈ ಮಾಹಿತಿಯನ್ನು ಹಂಚಿಕೊಂಡಿದ್ದರಿಂದ ಅದು ದೊಡ್ಡ ಸುದ್ದಿಯಾಗಿದೆ. ಈಗಾಗಲೇ ಶಸ್ತ್ರ ಚಿಕಿತ್ಸೆ ನಡೆದಿದ್ದು, ಆತಂಕ ಪಡುವಂತಹ ಅಗತ್ಯವಿಲ್ಲ ಎಂದಿದ್ದಾರೆ ಆಪ್ತರು. ಅಲ್ಲಿಂದ ಬಂದು ಮತ್ತೆ ಅವರು ಸಿನಿಮಾ ಸಂಬಂಧಿ ಕಾರ್ಯಗಳಲ್ಲಿ ತೊಡಗಲಿದ್ದಾರಂತೆ.