ಬೆಂಗಳೂರು: ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೇ ಅಕ್ರಮವಾಗಿ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಾ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈತ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಮೋಸ್ಟ್ ವಾಂಟೆಡ್ ನೈಜೀರಿಯನ್ ಪ್ರಜೆ ಜಾನ್ ಬಂಧಿತ ಆರೋಪಿ. ಮನೆಯಲ್ಲಿದ್ದ ಸಿಲಿಂಡರ್ ತಳದಲ್ಲೇ ಡ್ರಗ್ಸ್ ಸ್ಟೋರೇಜ್ ಮಾಡಿದ್ದ ಕಿಲಾಡಿ, ಕಚ್ಚಾ ವಸ್ತುವಿನಿಂದ ಕ್ಲಾಸಿ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ. ಕೊನೆಗೂ ಚಾಲಾಕಿಯನ್ನ ಬಂಧಿಸುವಲ್ಲಿ ವಿವಿ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ. ಭರ್ಜರಿ ಬೇಟೆಯಾಡಿರುವ ಪೊಲೀಸರು 2 ಕೋಟಿ ಮೌಲ್ಯದ 1 ಕೆಜಿ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಆರ್.ಟಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆಮನೆ ಪಡೆದಿದ್ದ ಜಾನ್ ಖುದ್ದು ತಾನೇ ಡ್ರಗ್ಸ್ ತಯಾರಿಸುತ್ತಿದ್ದ. ಶುದ್ಧ ಕಚ್ಛಾವಸ್ತುಗಳನ್ನ ಬಳಸಿ ಎಂಡಿಎಂಎ ಪೌಡರ್ ತಯಾರಿಸಿ ಮಾರಾಟ ಮಾಡ್ತಿದ್ದ. ಅದನ್ನ ಮನೆಯಲ್ಲೇ ಸಿಲಿಂಡರ್ ಕೆಳಗೆ ಸ್ಟೋರೆಜ್ ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿವಿ ಪುರಂ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ.
ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿ ಡ್ರಗ್ಸ್ ಪ್ಯಾಕೆಟ್‌ಗಳನ್ನ ಬಾತ್‌ರೂಮಿನಲ್ಲಿ ಹಾಕಿ ಫ್ಲೆಷ್ ಮಾಡಿ ಎಸ್ಕೇಪ್ ಆಗೋದಕ್ಕೆ ಪ್ರಯತ್ನಿಸಿದ್ದಾನೆ. ಕಿಟಕಿ ಮೂಲಕ ಜಂಪ್ ಮಾಡಿ ಪೈಪ್ ಮೂಲಕ ಮಹಡಿಯಿಂದ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಚಾಣಾಕ್ಷತೆ ಮೆರೆದ ಪೊಲೀಸರು ಆರೋಪಿಯ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧನದ ಬಳಿಕ ಜಾನ್, ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿ ಡ್ರಗ್ಸ್ ತಯಾರು ಮಾಡುತ್ತಿರೋದು ಬೆಳಕಿಗೆ ಬಂದಿದೆ. ಎಂಡಿಎಂಎ ತಯಾರು ಮಾಡಿ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡ್ತಿದ್ದ. ಗೋವಾ ಹಾಗೂ ಮಹಾರಾಷ್ಟ್ರೀಯ ಕಡೆಯಿಂದ ಶುದ್ಧ ಕಚ್ಛಾ ವಸ್ತುಗಳನ್ನ ತರಿಸಿಕೊಂಡು ಎಂಡಿಎಂಎ ತಯಾರು ಮಾಡ್ತಿದ್ದ ಅನ್ನೋದು ಗೊತ್ತಾಗಿದೆ.
ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ವಿವಿ ಪುರಂ ಪೊಲೀಸರು ಆರೋಪಿಗೆ ಸೆಲಬ್ರಿಟೀಸ್ ಅಥವಾ ಪಾರ್ಟಿಗಳ ಸಂಪರ್ಕ ಇದೆಯಾ ಎಂಬುದರ ಬಗ್ಗೆ ತನಿಖೆ ತನಿಖೆ ಮುಂದುವರಿಸಿದ್ದಾರೆ.