ಚೆನ್ನೈ: ಮ್ಯಾರಥಾನ್‌ನಲ್ಲಿ ಭಾಗವಹಿಸಿದ 20 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಭಾನುವಾರ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಮೃತನನ್ನು ಕಲ್ಲಕುರಿಚಿಯ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಭಾನುವಾರ ನಡೆದ ಉತಿರಂ 2023 ರಕ್ತದಾನ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ. ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಸುಬ್ರಮಣಿಯನ್ ಹಾಗೂ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಸಚಿವ ಪಿ ಮೂರ್ತಿ ಅವರು ಚಾಲನೆ ನೀಡಿದ್ದರು.
ಮುಂಜಾನೆ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಬಳಿಕ ವಿದ್ಯಾರ್ಥಿ 1 ಗಂಟೆಗಳ ಕಾಲ ಆರೋಗ್ಯವಾಗಿಯೇ ಇದ್ದಂತೆ ಕಾಣಿಸುತ್ತಿದ್ದ ಎಂದು ಆತನ ಸಹಪಾಠಿಗಳು ತಿಳಿಸಿದ್ದಾರೆ. ಬಳಿಕ ಆತ ಮೂರ್ಛೆ ಹೋಗಿದ್ದು, ತಕ್ಷಣ ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು ವಿದ್ಯಾರ್ಥಿಯನ್ನು 8:45ರ ಸುಮಾರಿಗೆ ತುರ್ತು ವಿಭಾಗಕ್ಕೆ ದಾಖಲಿಸಿದ್ದಾರೆ. ಅಲ್ಲಿ ಆತನಿಗೆ ಕೃತಕ ಉಸಿರಾಟದ ಬೆಂಬಲ ನೀಡಲಾಗಿದೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಬೆಳಗ್ಗೆ 10:10ರ ಸುಮಾರಿಗೆ ಆತ ಹೃದಯ ಸ್ಥಂಭನಕ್ಕೆ ಒಳಗಾಗಿದ್ದಾನೆ. ಆತನನ್ನು ವೈದ್ಯರು ಬದುಕಿಸಲು ಪ್ರಯತ್ನಿಸಿದರೂ ಬೆಳಗ್ಗೆ 10:45ಕ್ಕೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ದಿನೇಶ್ ಕುಮಾರ್ ಮಧುರೈನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.