ರಣರೋಚಕ ಪಂದ್ಯದಲ್ಲಿ 1 ವಿಕೆಟ್​ನಿಂದ ಗೆದ್ದ ಬ್ರಾಂಪ್ಟನ್ ತಂಡ

ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಲೀಗ್​ನ 5ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಬ್ರಾಂಪ್ಟನ್ ವೊಲ್ವ್ಝ್​ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೊರೊಂಟೊ ನ್ಯಾಷನಲ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ತಾರಿಖ್ (23) ಹಾಗೂ ಕಾಲಿನ್ ಮನ್ರೋ (24) ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿದರು. ಇದಾದ ಬಳಿಕ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಕಿರ್ಟನ್ (50) ಅರ್ಧಶತಕ ಬಾರಿಸಿದರು. ಪರಿಣಾಮ ​ಟೊರೊಂಟೊ ನ್ಯಾಷನಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್​ ಕಲೆಹಾಕಿತು.

143 ರನ್​ಗಳ ಸುಲಭ ಗುರಿ ಬೆನ್ನತ್ತಿದ ಬ್ರಾಂಪ್ಟನ್ ವೊಲ್ವ್ಝ್​ ತಂಡಕ್ಕೆ 2 ವಿಕೆಟ್ ಕಬಳಿಸುವ ಮೂಲಕ ಜಮಾನ್ ಖಾನ್ ಆರಂಭಿಕ ಆಘಾತ ನೀಡಿದ್ದರು. ಇದಾದ ಬಳಿಕ ಮಾರ್ಕ್​ ಚಾಪ್​ಮ್ಯಾನ್ (21) ಹಾಗೂ ಹುಸೇನ್ ತಲಾತ್ (44) ಉತ್ತಮ ಜೊತೆಯಾಟದೊಂದಿಗೆ ತಂಡಕ್ಕೆ ಆಸರೆಯಾದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಜ್ವಾನ್ ಚೀಮಾ 35 ರನ್​ ಬಾರಿಸುವುದರೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಫಝಲ್ಹಕ್ ಫಾರೂಖಿ ಚೀಮಾ ವಿಕೆಟ್ ಕಬಳಿಸಿದರು. ಇದಾಗ್ಯೂ ಕೊನೆಯ 3 ಓವರ್​ಗಳಲ್ಲಿ ಕೇವಲ 6 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ದಾಳಿಗಿಳಿದ ಶಾಹಿದ್ ಅಫ್ರಿದಿ 18ನೇ ಓವರ್​ನಲ್ಲಿ ನೀಡಿದ್ದು ಕೇವಲ 1 ರನ್ ಮಾತ್ರ. ಅಲ್ಲದೆ 2 ವಿಕೆಟ್ ಕಬಳಿಸಿದರು. ಇನ್ನು 19ನೇ ಓವರ್​ನಲ್ಲಿ 4 ರನ್​ ಕಲೆಹಾಕುವಲ್ಲಿ ಬ್ರಾಂಪ್ಟನ್ ವೊಲ್ವ್ಝ್ ತಂಡದ ಆಟಗಾರರು ಯಶಸ್ವಿಯಾದರು.

ಅದರಂತೆ ಕೊನೆಯ ಓವರ್​ನಲ್ಲಿ ಗೆಲ್ಲಲು 2 ರನ್​ಗಳಿಸಬೇಕಿತ್ತು. ಈ ಹಂತದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಝಮಾನ್ ಖಾನ್ ಮೊದಲ 4 ಎಸೆತಗಳಲ್ಲಿ ನೀಡಿದ್ದು ಕೇವಲ 1 ರನ್ ಮಾತ್ರ. ಇನ್ನು 2 ಎಸೆತಗಳಲ್ಲಿ 1 ರನ್ ಬೇಕಿದ್ದ ವೇಳೆ ಜಾನ್ ಫ್ರೈಲಿಂಕ್ ಫೋರ್​ ಬಾರಿಸಿದರು. ಈ ಮೂಲಕ ಬ್ರಾಂಪ್ಟನ್ ವೊಲ್ವ್ಝ್ ತಂಡವು 19.5 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಬಾರಿಸಿ 1 ವಿಕೆಟ್​ನಿಂದ ರೋಚಕ ಗೆಲುವು ತಮ್ಮದಾಗಿಸಿಕೊಂಡರು.

ಬ್ರಾಂಪ್ಟನ್ ವೊಲ್ವ್ಝ್ ಪ್ಲೇಯಿಂಗ್ 11: ಉಸ್ಮಾನ್ ಖಾನ್ (ವಿಕೆಟ್ ಕೀಪರ್) , ಆರನ್ ಜಾನ್ಸನ್ , ಮಾರ್ಕ್ ಚಾಪ್​ಮ್ಯಾನ್ , ಕಾಲಿನ್ ಡಿ ಗ್ರ್ಯಾಂಡ್ಹೋಮ್ , ಕ್ರಿಸ್ ಗ್ರೀನ್ , ಹುಸೇನ್ ತಲತ್ , ಲೋಗನ್ ವ್ಯಾನ್ ಬೀಕ್ , ಜಾನ್ ಫ್ರಿಲಿಂಕ್ , ಟಿಮ್ ಸೌಥಿ (ನಾಯಕ) , ಶಾಹಿದ್ ಅಹ್ಮದ್ಜಾಯ್ , ರಿಜ್ವಾನ್ ಚೀಮಾ.