ಹೆಚ್ಚು ಜನ ಪ್ರಯಾಣಿಸುವ ಬಿಎಂಟಿಸಿ ರೂಟ್ ಮಾರ್ಕ್ ಮಾಡಿಕೊಂಡಿದ್ದ ಶಂಕಿತರು!

ಬೆಂಗಳೂರು: ನಗರದಲ್ಲಿ ಸೆರೆ ಸಿಕ್ಕ ಐವರು ಶಂಕಿತ ಉಗ್ರರ ತನಿಖೆಯಿಂದ ದಿನಕ್ಕೊಂದು ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ಆರೋಪಿಗಳು ನಗರದಲ್ಲಿ ಸಂಚರಿಸುವ ಬಿಎಂಟಿಸಿ (BMTC) ಬಸ್‍ಗಳ ಮೇಲೆ ಕಣ್ಣಿಟ್ಟಿದ್ದರು ಎಂದು ತನಿಖೆ ವೇಳೆ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

ಪ್ರತಿದಿನ ಬೇರೆ ಬೇರೆ ಕೆಲಸಕ್ಕೆ ಲಕ್ಷಾಂತರ ಜನ ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಶಂಕಿತರು ಬಿಎಂಟಿಸಿ ಬಸ್‍ಗಳನ್ನ ಟಾರ್ಗೆಟ್ ಮಾಡಿ ಸ್ಫೋಟಗೊಳಿಸಲು ಪ್ಲಾನ್ ಮಾಡಿದ್ದರು. ಅಲ್ಲದೇ ಪ್ರಯಾಣಿಕರು ಹೆಚ್ಚಾಗಿ ಪ್ರಯಾಣಿಸುವ ರೂಟ್‍ಗಳನ್ನು ಗುರುತು ಮಾಡಿಕೊಂಡು ಸ್ಫೋಟಕ್ಕೆ ತಯಾರಿ ನಡೆಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ಮೊದಲು ವಿಪಕ್ಷಗಳ ಸಭೆಗೆ ಸ್ಕೆಚ್ ಹಾಕಿದ್ದ ಮಾಹಿತಿ ಹೊರ ಬಂದಿತ್ತು. ಆದರೆ ಅಲ್ಲಿನ ಭದ್ರತೆಯಿಂದಾಗಿ ಇದು ವಿಫಲವಾಗಿತ್ತು ಎಂಬ ವಿಚಾರ ಕೇಳಿಬಂದಿತ್ತು. ಬಳಿಕ ಬೆಂಗಳೂರು ಹಾಗೂ ಕರಾವಳಿ ಭಾಗಗಳಲ್ಲಿ ಜನ ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಸ್ಫೋಟಿಸಲು ಸ್ಕೆಚ್ ಹಾಕಿದ್ದ ವಿಚಾರವೂ ತನಿಖೆ ವೇಳೆ ಬಯಲಾಗಿತ್ತು. ಇನ್ನೂ ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆರೋಪ ಸಹ ಕೇಳಿಬಂದಿತ್ತು. ಈ ವಿಚಾರವಾಗಿ ಪ್ರಮುಖ ಆರೋಪಿ ಜುನೈದ್‍ಗೆ ಹಿಂದೂ ಮುಖಂಡರ ಫೋಟೋಗಳು ರವಾನೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಜನಸಾಮಾನ್ಯರು ಸಂಚರಿಸುವ ಬಿಎಂಟಿಸಿ ಬಸ್‍ಗಳ ಮೇಲೂ ಶಂಕಿತರು ಕಣ್ಣಿಟ್ಟಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಇದರ ನಡುವೆಯೇ ಪ್ರಮುಖ ಆರೋಪಿ ಜುನೈದ್ ಬಂಧನಕ್ಕೆ ಲುಕ್ ಔಟ್ ನೋಟಿಸ್‍ಗೆ ಸಿಸಿಬಿ ಸಿದ್ಧತೆ ನಡೆಸಿದೆ. ಈ ವಿಚಾರವಾಗಿ ಎನ್‍ಐಎ (NIA) ಅಧಿಕಾರಿಗಳೊಂದಿಗೂ ಸಿಸಿಬಿ ಪೊಲೀಸರು ಚರ್ಚಿಸಿದ್ದಾರೆ.