ಹಿಮಾಚಲ ಪ್ರದೇಶದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆ, ದೆಹಲಿಯಲ್ಲಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಯಮುನೆ

ಹಿಮಾಚಲ ಪ್ರದೇಶದ ಹಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್​ ಘೋಷಿಸಿದೆ. ಇನ್ನೊಂದೆಡೆ ದೆಹಲಿಯಲ್ಲಿ ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ತೀವ್ರ ಕಟ್ಟೆಚ್ಚರವಹಿಸಲಾಗಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಯಮುನಾ ನದಿಯ ನೀರಿನ ಮಟ್ಟ 205.81 ಮೀಟರ್ ದಾಖಲಾಗಿದೆ. ನದಿಯ ಪ್ರವಾಹವನ್ನು ತೋರಿಸಲು ಲೋಹಾ ಪುಲ್‌ನಿಂದ ಡ್ರೋನ್ ದೃಶ್ಯಗಳನ್ನು ಎಎನ್‌ಐ ಬಿಡುಗಡೆ ಮಾಡಿದೆ.

ಜುಲೈ 13 ರಿಂದ ನದಿಯು ನಿಧಾನವಾಗಿ ಕಡಿಮೆಯಾಗಲು ಶುರುವಾಗಿತ್ತು ಮತ್ತು ಅಪಾಯದ ಮಟ್ಟಕ್ಕಿಂತ ಕಡಿಮೆಯಾಗಿತ್ತು ಮತ್ತು ಕೆಲವೇ ಗಂಟೆಗಳ ಹಿಂದೆ 205.7 ಮೀಟರ್‌ಗಳಷ್ಟು ಹರಿಯುತ್ತಿತ್ತು. ಈ ಹಿಂದೆ ಯಮುನಾ ನದಿಯ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ 208.66 ಮೀಟರ್‌ನಷ್ಟು ದಾಖಲಾಗಿತ್ತು.

ಹಿಮಾಚಲದಲ್ಲಿ ಮುಂದಿನ 24 ಗಂಟೆಗಳ ಕಾಲ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಸಿರ್ಮೌರ್ ಜಿಲ್ಲೆಯಲ್ಲಿ 195 ಮಿಮೀ ಮಳೆಯಾಗಿದೆ ಎಂದು ಐಎಂಡಿ ಉಪ ನಿರ್ದೇಶಕ ಬುಯಿ ಲಾಲ್ ಎಎನ್‌ಐಗೆ ತಿಳಿಸಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಚಂಬಾ, ಕಾಂಗ್ರಾ, ಕುಲು, ಮಂಡಿ, ಶಿಮ್ಲಾ, ಸೋಲನ್, ಸಿರ್ಮೌರ್ ಮತ್ತು ಬಿಲಾಸ್‌ಪುರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಭಾರತವಲ್ಲದೆ, ಗುಜರಾತ್ ಮತ್ತು ಮಹಾರಾಷ್ಟ್ರದ ಪಶ್ಚಿಮ ರಾಜ್ಯಗಳು ಸಹ ಭಾರಿ ಪ್ರವಾಹಕ್ಕೆ ಸಾಕ್ಷಿಯಾಗುತ್ತಿವೆ. ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ನವಸಾರಿ ಮತ್ತು ಜುನಾಗಢ ಎರಡು ಸ್ಥಳಗಳಲ್ಲಿ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದೆ.