ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿರುವ ಐವರು ಶಂಕಿತ ಉಗ್ರರ ಪ್ರಮುಖ ಸೂತ್ರದಾರ, ವಿಧ್ವಂಸಕ ಕೃತ್ಯಗಳಿಗೆ ಸಂಚು ಹೂಡಿದ್ದ ಎನ್ನಲಾದ ಜುನೈದ್ ಅಹಮದ್ ಈ ಹಿಂದೆ ಮೂರು ಬಾರಿ ಬಂಧನಕ್ಕೊಳಗಾಗಿದ್ದ. ಆ ನಂತರ ವಿದೇಶಕ್ಕೆ ಪಲಾಯನಗೈದಿದ್ದ ಎಂಬ ವಿಚಾರ ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರು ನಗರ ಅಪರಾಧ ವಿಭಾಗ ಪೊಲೀಸರು ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ಐವರನ್ನು ಬಂಧಿಸಿದ್ದರು. ದಾಳಿಯಲ್ಲಿ ಸಂದರ್ಭ ದೇಶಿ ನಿರ್ಮಿತ ಬಂದೂಕುಗಳು ಮತ್ತು 45 ಸುತ್ತು ಸಜೀವ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ನಗರದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ಭಯೋತ್ಪಾದನಾ ಘಟಕವನ್ನು ಸಕ್ರಿಯಗೊಳಿಸಿದವನು ಜುನೈದ್ ಎಂಬುದನ್ನು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಈಗಾಗಲೇ ಖಚಿತಪಡಿಸಿದ್ದಾರೆ.
ಬಂಧಿತರಾಗಿರುವ ಐವರು ಆರೋಪಿಗಳು ಪರಾರಿಯಾಗಿರುವ ಮತ್ತೋರ್ವ ವ್ಯಕ್ತಿ (ಜುನೈದ್) ಜೊತೆಗೆ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಇವರೆಲ್ಲ 2017ರಲ್ಲಿ ಬೆಂಗಳೂರು ನಗರದ ಆರ್‌ಟಿ ನಗರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬುದು ತಿಳಿದುಬಂದಿದೆ. ಇವರು ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾಗ, 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಟಿ ನಜೀರ್‌ನ ಸಂಪರ್ಕಕ್ಕೆ ಬಂದರು. ಇವರಿಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಜೀರ್ ಕುಮ್ಮಕ್ಕು ನೀಡಿದ್ದಾನೆ ಎಂದು ದಯಾನಂದ ಹೇಳಿರುವುದಾಗಿ ವರದಿ ಮಾಡಿದೆ.
ಮಾಸ್ಟರ್ ಮೈಂಡ್ ಜುನೈದ್ ಅಹಮದ್ ಯಾರು?
ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಚು ರೂಪಿಸಿದ್ದಕ್ಕಾಗಿ ಪೊಲೀಸರಿಗೆ ಬೇಕಾಗಿರುವ 29 ವರ್ಷದ ಯುವಕ ನಗರದ ಆರ್‌ಟಿ ನಗರ ಸಮೀಪದ ಕನಕನಗರದ ನಿವಾಸಿ. 2017ರಲ್ಲಿ ವ್ಯಾಪಾರ ವೈಷಮ್ಯದ ಹಿನ್ನೆಲೆಯಲ್ಲಿ ನೂರ್ ಅಹ್ಮದ್‌ನನ್ನು ಅಪಹರಿಸಿ ಕೊಲೆ ಮಾಡಿದ್ದಕ್ಕಾಗಿ ಆತನನ್ನು ಇತರ ಐವರನ್ನೊಳಗೊಂಡಂತೆ ಪೊಲೀಸರು ಬಂಧಿಸಿದ್ದರು.
2017ರ ಅಕ್ಟೋಬರ್ 10 ರಂದು ಜುನೈದ್ ಮತ್ತು ಇತರ ಐವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣಾಧೀನ ಕೈದಿಗಳಾಗಿ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿತ್ತು. ಜುನೈದ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಜೀರ್‌ನ ಸಂಪರ್ಕಕ್ಕೆ ಬಂದಿದ್ದ. ಪೊಲೀಸರ ಪ್ರಕಾರ, ನಜೀರ್‌ಗೆ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆ ಸಂಪರ್ಕವಿದೆ ಎನ್ನಲಾಗಿದೆ.