ಯಲ್ಲಾಪುರ: ಕಳೆದ ವರ್ಷ ಭೂಕುಸಿತಕ್ಕೊಳಗಾದ ತಾಲೂಕಿನ ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲಿ ಮಠದ ನಿಯೋಗ ಭೇಟಿ ನೀಡಿ, ಕಳಚೆಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಭೂಕುಸಿತ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಹೋರಾಟದ ಸಮಿತಿಯ ಸಭೆ ನಡೆಸಿತು. ಈ ಸಭೆಯಲ್ಲಿ ವ್ಯವಸ್ಥಿತವಾದ ಪುನರ್ವಸತಿ ಕಲ್ಪಿಸಿ ಸ್ಥಳಾಂತರಿಸುವ ಕುರಿತು ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ಕಳೆದ ವರ್ಷದ ಭೂಕುಸಿತದಿಂದ ಸಂಪೂರ್ಣ ಹಾಗೂ ಭಾಗಶಃ ಮನೆ ಕಳೆದುಕೊಂಡವರಿಗೆ ಸರ್ಕಾರ ಘೋಷಿಸಿದ ಪರಿಹಾರ ಶೀಘ್ರ ಬಿಡುಗಡೆ ಆಗಬೇಕು. ಈವರೆಗೆ ಸಂತ್ರಸ್ಥ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಕೇವಲ 95,000 ರೂ ಬಿಡುಗಡೆ ಆಗಿದೆ. ಇನ್ನೂ ಭೂಕುಸಿತ ಉಂಟಾಗುವ ಭೀತಿ ಇರುವ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ಎಲ್ಲಿ ಮಾಡಬೇಕು ಎನ್ನುವ ಗೊಂದಲದಲ್ಲಿ ಸಂತ್ರಸ್ಥರಿದ್ದಾರೆ. ಅದಕ್ಕಾಗಿ ಉಳಿದ ಮೊತ್ತವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ವತಃ ಮುಖ್ಯಮಂತ್ರಿಗಳೇ ಪ್ರಾಕೃತಿಕ ವಿಕೋಪದ ಗಂಭೀರತೆಯನ್ನು ಅವಲೋಕಿಸಿ, ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಈವರೆಗೆ ಕಳಚೆ ಭಾಗಕ್ಕೆ ಬಂದಿರುವ ಪರಿಹಾರದ ಮೊತ್ತ ಕೇವಲ 2 ಕೋಟಿ ರೂ ಮಾತ್ರ. ಭೂಕುಸಿತದಲ್ಲಿ ನಷ್ಟವಾದ 12 ಕಾಲುಸಂಕಗಳು, 13 ಬಾಂದಾರ್‌ಗಳ ಪುನರ್ ನಿರ್ಮಾಣ ಆಗಿಲ್ಲ. ಭೂಕುಸಿತದಿಂದ ತೊಂದರೆಗೆ ಒಳಗಾದರೂ ಅನಿವಾರ್ಯವಾಗಿ ಅದೇ ಸ್ಥಳದಲ್ಲಿ ವಾಸವಿದ್ದಾರೆ. ಅವರಿಗೆ ಕುಡಿಯುವ ನೀರು, ಕಾಲುಸಂಕ, ಬಾಂದಾರ್, ರಸ್ತೆ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಗ್ರಾಮಸ್ಥರಾದ ಆರ್. ಪಿ. ಹೆಗಡೆ, ಗಜಾನನ ಭಟ್ಟ, ವೆಂಕಟ್ರಮಣ ಬೆಳ್ಳಿ, ಗೋಪಾಲ ಭಟ್ಟ, ಉಮೇಶ ಭಾಗ್ವತ ಇತರರು ಆಗ್ರಹಿಸಿದ್ದಾರೆ.
ಸಂತ್ರಸ್ಥರು ತಮ್ಮ ಆದಾಯದ ಮೂಲವಾದ ಜಮೀನುಗಳನ್ನು ಕಳೆದುಕೊಂಡಿರುವುದರಿಂದ ಸಹಕಾರಿ ಸಂಘ ಹಾಗೂ ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಮನ್ನಾ ಮಾಡಬೇಕು. ಸ್ಥಳೀಯ ಸಹಕಾರಿ ಸಂಘದಿಂದ ಒಟ್ಟೂ 16.17 ಕೋಟಿ ರೂ ಸಾಲ ವಿತರಣೆಯಾಗಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ತಾಲೂಕು ಮಾರ್ಕೆಟಿಂಗ್ ಸೊಸೈಟಿ, ಪಿ.ಎಲ್.ಡಿ.ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ಸಾಲದ ವಿವರಗಳನ್ನು ಪಡೆದು ಸರ್ಕಾರದಿಂದ ಸಾಲಮನ್ನಾ ಸೌಲಭ್ಯದ ನೆರವನ್ನು ಕೋರಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಮುಖ್ಯಮಂತ್ರಿಗಳು ಕಳಚೆಯ ಸಂತ್ರಸ್ಥರ ಪುನರ್ವಸತಿಯ ಬಗ್ಗೆ ಘೋಷಿಸಿದ್ದ 15 ಎಕರೆ ಭೂಮಿಯನ್ನು ಶೀಘ್ರ ಒದಗಿಸಬೇಕು ಎನ್ನುವ ಬೇಡಿಕೆ ಕೂಡ ಸಭೆಯಲ್ಲಿ ವ್ಯಕ್ತವಾಯಿತು.
ಸ್ವರ್ಣವಲ್ಲೀ ನಿಯೋಗದ ಅನಂತ ಹೆಗಡೆ ಅಶೀಸರ ಕಳಚೆಯಲ್ಲಿ ದುರಂತ ನಡೆದು ಒಂದು ವರ್ಷ ಕಳೆದರು ಕೂಡ ಈವರೆಗೆ ಪರಿಹಾರ ದೊರಕದೇ ಇರುವ ಕುರಿತು ಶ್ರೀಗಳು ವಿಧಾನಸಭಾಧ್ಯಕ್ಷರಿಗೆ ಕರೆ ಮಾಡಿ, ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಹಳ್ಳಿ ಶ್ರೀಗಳ ಮಾರ್ಗದರ್ಶನದಲ್ಲಿ ಕಳಚೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದುದಾಗಿ ತಿಳಿಸಿದರು. ನಿಯೋಗದ ಪ್ರಮುಖ ನಾರಾಯಣ ಹೆಗಡೆ ಗಡಿಕೈ ಸಭೆಯ ನಿರ್ಣಯಗಳನ್ನು ವಾಚಿಸಿದರು. ಹೋರಾಟ ಸಮಿತಿ ಪ್ರಮುಖರಾದ ಅನಂತ ಹೆಗಡೆ, ರಾಮಚಂದ್ರ ಭಟ್ಟ, ರಾಮಚಂದ್ರ ಹೆಗಡೆ, ಗಣಪತಿ ಹೆಗಡೆ, ರಾಘವೇಂದ್ರ ಭಟ್ಟ, ಕಾಶೀನಾಥ ಕಳಸ, ವಿಶ್ವೇಶ್ವರ ಭಟ್ಟ, ಜನಾರ್ದನ ಹೆಬ್ಬಾರ್ ಹಾಗೂ ಮತ್ತಿತರು ಸಭೆಯಲ್ಲಿ ಉಪಸ್ಥಿತರಿದ್ದರು.