ಬೆಂಗಳೂರು ಗ್ರಾಮಾಂತರ: ಕರ್ನಾಟಕ- ತಮಿಳುನಾಡು ಗಡಿ ತಾಲೂಕಾದ ಆನೇಕಲ್ನಲ್ಲಿ ಹಸುಗಳು ವಿಚಿತ್ರ ಖಾಯಿಲೆಗೆ ತುತ್ತಾಗಿ ನರಳಾಡುತ್ತಿದೆ. ಹಸುವನ್ನ ಉಳಿಸಿಕೊಳ್ಳಲು ರೈತರು ಪರದಾಟ ನಡೆಸುತ್ತಿದ್ದಾರೆ. ತಾಲ್ಲೂಕಿನ ಸುರಗಜಕ್ಕನಹಳ್ಳಿ, ಹಾರಗದ್ದೆ, ವಣಕನಹಳ್ಳಿ, ಗುಡ್ನಹಳ್ಳಿ ಹಾಗೂ ಸಮಂದೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದ ರೈತರ ಹಸುಗಳಿಗೆ ಮಾರಕ ರೋಗವೊಂದು ಕಾಣಿಸಿಕೊಂಡಿದೆ. ಹಸುಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದವರಿಗೆ, ಇದೀಗ ಅವುಗಳ ಜೀವ ಉಳಿಸಲು ಪರದಾಡುವ ಸ್ಥಿತಿ ನಿಮಾರ್ಣವಾಗಿದೆ
ರೋಗ ಲಕ್ಷಣಗಳು
ಮೊದಲಿಗೆ ಹಸುಗಳಲ್ಲಿ ಕಿವಿ ಸೋರುವಿಕೆಯಾಗುತ್ತದೆ. ಇದಾದ ಮೂರ್ನಾಲ್ಕು ದಿನಗಳಲ್ಲಿ ತಲೆಯಲ್ಲಿ ಸೋಂಕು ಕಾಣಿಸಿಕೊಂಡು ಹಸು ಸೊರಗುತ್ತದೆ. ನಂತರ ಮೂಗು, ಬಾಯಿಯಲ್ಲಿ ಜೊಲ್ಲಿನ ಮಾದರಿ ಸೋರಿಕೆಯಾಗುತ್ತದೆ. ಈ ವೇಳೆ ಹಸು ವಾಲಿಕೊಂಡು ನಿಲ್ಲುವುದರಿಂದ ತಲೆ ಬೆನ್ನು ಮೂಳೆ ಸಂಪೂರ್ಣ ನಿಷ್ಕ್ರಿಯಗೊಂಡು ತಿಂದ ಆಹಾರ ಮೂಗು ಹಾಗೂ ಬಾಯಿಯಿಂದ ವಾಪಸ್ ಬರುತ್ತಿದ್ದು, ಹಸುಗಳು ಮೇವು ತಿನ್ನದೆ ನೀರನ್ನ ಕುಡಿಯದಂತಾಗಿ ಸಂಪೂರ್ಣ ಅಸ್ವಸ್ಥಗೊಂಡು ಸಾವನ್ನಪ್ಪುತ್ತಿವೆ. ಈ ರೋಗದಿಂದಾಗಿ ಹಸುಗಳು ಹೈರಾಣಾಗಿದ್ದರೆ, ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ರೈತರು ಕಂಗಾಲಾಗಿದ್ದಾರೆ. ಹೈನುಗಾರಿಕೆಯನ್ನೇ ನಂಬಿಕೊಂಡಿದ್ದ ರೈತರು ಈ ರೋಗದಿಂದ ಹಸುಗಳನ್ನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಸಾವನ್ನಪ್ಪಿದ15 ಕ್ಕೂ ಹೆಚ್ಚು ಹಸುಗಳು
ಇನ್ನು ಈ ಹಿಂದೆ ತಮಿಳುನಾಡಿನ ಹಲವು ಗ್ರಾಮಗಳಲ್ಲಿ ಈ ವಿಚಿತ್ರ ರೋಗವು ಕಾಣಿಸಿಕೊಂಡು ಆದೆಷ್ಟೋ ಹಸುಗಳು ಸಾವನ್ನಪ್ಪಿದ್ದವು. ಇದೀಗ ತಮಿಳುನಾಡು ಗಡಿಭಾಗ ಆನೇಕಲ್ ತಾಲ್ಲೂಕಿನ ಗಡಿ ಗ್ರಾಮಗಳಿಗೆ ಆವರಿಸಿದ್ದು, ರೈತಾಪಿ ಜನರ ಜೀವನಾಡಿಯಾಗಿದ್ದ ಹಸುಗಳ ಮಾರಣಹೋಮವಾಗುತ್ತಿದೆ. ಈಗಾಗಲೇ ತಾಲ್ಲೂಕಿನಲ್ಲಿ ಸುಮಾರು 15 ಹೆಚ್ಚು ಹಸುಗಳು ಸಾವನ್ನಪ್ಪಿದ್ದು, 30 ಹೆಚ್ಚು ಹಸುಗಳು ರೋಗಕ್ಕೆ ತುತ್ತಾಗಿವೆ ಎನ್ನಲಾಗಿದೆ. ಇದೀಗ ಆನೇಕಲ್ ಭಾಗದಲ್ಲಿ ಹಸುಗಳಲ್ಲಿ ಸೋಂಕು ಉಲ್ಬಣಗೊಂಡಿರುವುದರಿಂದ ಪ್ರತ್ಯೇಕ ಲಸಿಕೆ ಇಲ್ಲದೆ ಹಸುಗಳು ಸಾವನ್ನಪ್ಪುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ.
ಇದಕ್ಕೆ ನಿಶ್ಚಿತ ಲಸಿಕೆಯಿಲ್ಲ ಎಂದ ನಿವೃತ್ತ ಪಶು ವೈದ್ಯ
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಈ ಕಾಯಿಲೆ ಯಾವುದೆಂದು ಪತ್ತೆ ಹಚ್ಚಿ, ಅದಕ್ಕೆ ಔಷಧಿಯನ್ನ ಕಂಡು ಹಿಡಿಯುವ ಮೂಲಕ ಹೈನುಗಾರಿಕೆ ನಡೆಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ನಿವೃತ್ತ ಪಶು ವೈದ್ಯರಾದ ಪ್ರಕಾಶ್ ಹೆಬ್ಬಾರ್ ಮಾಹಿತಿಯನ್ನ ನೀಡಿದ್ದು, ಇದೊಂದು ಮಾರಕ ರೋಗವಾಗಿದ್ದು, ನಿಶ್ಚಿತ ಲಸಿಕೆ ಇಲ್ಲ. ತಾಲೂಕಿನ ಹಲವು ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಮಾರಕವಾದ ರೋಗಕ್ಕೆ ತುತ್ತಾಗುತ್ತಿರುವ ಹಸುಗಳಿಗೆ ಯಾವ ರೀತಿಯ ಚಿಕಿತ್ಸೆಯನ್ನ ನೀಡಿ ಅವುಗಳನ್ನ ಉಳಿಸಿಕೊಳ್ಳಬೇಕು ಎಂಬುದು ತಿಳಿಯದಂತಾಗಿದೆ. ಸರ್ಕಾರ ಆದಷ್ಟು ಬೇಗ ವೈದ್ಯಕೀಯ ಇಲಾಖೆ ಮೂಲಕ ಲಸಿಕೆ ಕಂಡು ಹಿಡಿದರೆ ರೈತರು ನೆಮ್ಮದಿಯಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಒಟ್ಟಿನಲ್ಲಿ ರೈತಾಪಿ ಜನರಿಗೆ ಆಸರೆಯಾಗಿದ್ದ ಹಸುಗಳಿಗೆ ಈ ಮಾರಕ ರೋಗ ತಗುಲಿ ಸಾವನ್ನಪ್ಪುತ್ತಿದ್ದು, ಕೂಡಲೇ ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಹಸುಗಳ ಸಾವಿನ ನಿಖರ ಕಾರಣವನ್ನ ಕಂಡು ಹಿಡಿದು, ಹಸುಗಳ ಜೀವ ಉಳಿಸಬೇಕೆಂಬುದು ರೈತಾಪಿ ಜನರು ಆಗ್ರಹವಾಗಿದೆ.