ಸೈಬರ್ ಕಳ್ಳರ ಹಾವಳಿ: ಸಾರ್ವಜನಿಕರನ್ನು ಎಚ್ಚರಿಸಿದ ಬೆಂಗಳೂರು, ಚಾಮರಾಜನಗರ ಪೊಲೀಸ್ರು

ಚಾಮರಾಜನಗರ: ಸೈಬರ್ ಚೋರರ ಚಿತ್ತ ಈಗ ಚಾಮರಾಜನಗರ ಜಿಲ್ಲೆಯತ್ತ ನೆಟ್ಟಿದೆ. ಏಕೆಂದರೆ ಕಳೆದ 7 ತಿಂಗಳಲ್ಲಿ ಬರೋಬ್ಬರಿ 29 ಎಫ್​ಐಆರ್​ ಕೇಸ್​ಗಳು ದಾಖಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್ ಆಗಿರುವವರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿ ಈ ಸೈಬರ್ ಚೋರರು ಪಂಗನಾಮ ಹಾಕುತ್ತಾರೆ. ಫಾರಿನ್ ಗಿಫ್ಟ್ ಆಮೀಶವೊಡ್ಡಿ ಲಕ್ಷ ಲಕ್ಷ ಹಣ ಪೀಕುತ್ತಾರೆ. ಅಲ್ಲದೆ ಬೆಂಗಳೂರಿನಲ್ಲೂ ಸೈಬರ್ ಖದೀಮರು ಹೊಸ ಹೊಸ ಮಾರ್ಗದಲ್ಲಿ ಜನರನ್ನು ವಂಚಿಸಲು ನಿಂತಿದ್ದಾರೆ. ಹೀಗಾಗಿ ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಲು ಮುಂದಾಗಿದ್ದಾರೆ.

ಚಾಮರಾಜನಗರದಲ್ಲಿ ಸೈಬರ್ ಖದೀಮರು ವಂಚನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಫ್ರೀ ಗಿಫ್ಟ್, 50 ಪರ್ಸೆಂಟ್ ಆಫರ್ ನೀಡುವುದಾಗಿ ನಂಬಿಸಿ ಜನರಿಗೆ ಮೋಸ ಮಾಡಲಾಗುತ್ತಿದೆ. ಯುವಕ ಯುವತಿಯರನ್ನೆ ಟಾರ್ಗೆಟ್ ಮಾಡಿ ವಂಚನೆ ಮಾಡ್ತಿದ್ದಾರೆ. ಹೀಗಾಗಿ ಸೈಬರ್ ವಂಚನೆಗೆ ಒಳಗಾದವರು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಸೂಚನೆ ನೀಡಿದ್ದಾರೆ. ಘಟನೆ ನಡೆದ 2 ಗಂಟೆಯೊಳಗೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಲು ತಿಳಿಸಿದ್ದಾರೆ.

ಸೈಬರ್ ಚೋರರಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಓಟಿಪಿ ಹಾಗೂ ಅನಾವಶ್ಯಕ ಲಿಂಕ್ ಬಗ್ಗೆ ಎಚ್ಚರದಿಂದ ಇರಲು ತಿಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಸೈಬರ್ ವಂಚನೆ ಕುರಿತು ಸೂಕ್ತ ಮಾಹಿತಿಯನ್ನ ನೀಡಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಹಾಗೂ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಭೆ ನಡೆಸಿ ಸೈಬರ್ ಕ್ರೈಂ ವಂಚನೆ ಕುರಿತು ಖಚಿತ ಮಾಹಿತಿ ನೀಡಲು ಚಿಂತನೆ ನಡೆದಿದೆ.

ಬೆಂಗಳೂರಿನಲ್ಲಿ ಹೊಸ ಮಾದರಿಯ ಸೈಬರ್ ಕ್ರೈಮ್ ಬೆಳಕಿಗೆ, ಪೊಲೀಸರಿಂದ ಎಚ್ಚರಿಕೆಯ ಪೋಸ್ಟ್

ಸಾರ್ವಜನಿಕರಿಗೆ ಜಾಗ್ರತೆಯಿಂದ ಇರಲು ಬೆಂಗಳೂರು ಪೊಲೀಸ್ ಇಲಾಖೆ ಸೂಚಿಸಿದೆ. ಫೆಡೆಕ್ಸ್ ಕಂಪನಿ ಎಂದು ಹೇಳಿಕೊಂಡು ಮೊದಲು ಕರೆ ಮಾಡುತ್ತಾರೆ. ನಿಮ್ಮದೊಂದು ಪಾರ್ಸಲ್ ಬಂದಿದೆ. ಆದ್ರೆ ಅದಕ್ಕೆ ಕಾನೂನು ತೊಡಕು ಇದೆ ಎಂದು ತಿಳಿಸುತ್ತಾರೆ. ನಂತ್ರ ಕಾನೂನು ಸಮಸ್ಯೆ ಬರತ್ತೆ ಎದುರಿಸಿ ಎಂದು ಬೆದರಿಕೆ ಹಾಕಿ ಫೋನ್ ಇಡುತ್ತಾರೆ. ಬಳಿಕ ಮುಂಬಯಿ ನಾರ್ಕೊಟಿಕ್ಸ್ ಡಿವಿಜನ್, ಸಿಬಿಐ, ಅಥವಾ ಇಡಿ ಅಧಿಕಾರಿ ಕರೆ ಮಾಡಿ ಮಾತನಾಡುತ್ತಾರೆ. ಅಕೌಂಟ್ ವೆರಿಫಿಕೇಷನ್ ಎಂದು ಹಣ ಹಾಕಲು ಸೂಚಿಸಿ ಮತ್ತೆ ವಾಪಸ್ಸು ಹಣ ಬರುತ್ತೆ ಎಂದು ತಿಳಿಸುತ್ತಾರೆ. ಹೀಗೆ ಸೈಬರ್ ಕ್ರೈಮ್ ನಡೆಯುತ್ತಿದೆ. ಈ ರೀತಿ ಕರೆ ಬಂದ್ರೆ ಸ್ಥಳೀಯ ಪೊಲೀಸ್ ಠಾಣೆ ಅಥವ 1930 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.