‘ನಾವು ಸಮರ್ಥನೆ ಮಾಡಿಕೊಳ್ಳೋದಿಲ್ಲ, ಜಿಹಾದ್ ಕಿತ್ತುಹಾಕಲು ನಾವು ಬದ್ಧರಿದ್ದೇವೆ’ ಸಿಟಿ ರವಿ ಗುಡುಗು

ಬೆಂಗಳೂರು: ಸಿದ್ದರಾಮಯ್ಯ ಕಾಲದಲ್ಲೂ ಸರಣಿ ಹತ್ಯೆ ನಡೆಯುತ್ತಿತ್ತು. ಈಗಲೂ ಅದೇ ರೀತಿ ನಡೆಯುತ್ತಿದೆ ಎನ್ನುವ ಆರೋಪವಿದೆ. ಈ ಹಿಂದೆ ಹಿಂದೂ ವಿರೋಧಿ ಸರ್ಕಾರವಿತ್ತು. ಈಗ ಹಿಂದೂಪರ ಸರ್ಕಾರವಿದೆ. ಆದರೂ, ಹೀಗಾಗ್ತಿದೆ ಅನ್ನೋ ಆತಂಕ ಕಾರ್ಯಕರ್ತರದ್ದು. ಆದರೆ ನಾವು ಕೇವಲ ಅಧಿಕಾರ ಮಾಡಲು ಬಂದಿಲ್ಲ. ಪಕ್ಷದ ಕಾರ್ಯಕರ್ತರೊಂದಿಗೆ ನಾವೂ ಇದ್ದೇವೆ. ಅವರ ಭಾವನೆ ಜೊತೆಗೆ ನಾವೂ ನಿಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಟಿ ರವಿ ಚಂದ್ರು, ಹರ್ಷ, ಪ್ರವೀಣ್ ನಾಳೆ ಇನ್ಯಾರೋ.? ಗೊತ್ತಿಲ್ಲ ನಾವೀಗ ಆಕ್ಷನ್ ಮಾಡದಿದ್ರೆ ನಾವೇ ಹೊಣೆ ಹೊರಬೇಕಾಗುತ್ತದೆ. ಹಿಂದಿನ ಸರ್ಕಾರ ಓಟ್ ಬ್ಯಾಂಕ್‌ಗಾಗಿ ಓಲೈಕೆ ಮಾಡ್ತಿತ್ತು. ನಾವು ಆ ರೀತಿ ಯಾವುದೇ ಓಲೈಕೆ ಮಾಡಲ್ಲ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಸಿಎಂ ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದರು.

ವ್ಯವಸ್ಥೆಯನ್ನ ಜಿಹಾದ್ ವಿರುದ್ಧ ಹೋರಾಟ ಮಾಡಲು ಅಣಿಗೊಳಿಸಬೇಕು. ಅಮರಾವತಿ, ಉದಯ್ ಪುರದಲ್ಲಿ ನಡೆದ ಘಟನೆಯ ಒಂದು ಭಾಗ ಇದು ಎಂದ ಅವರು, ಪ್ರವೀಣ್ ನೆಟ್ಟಾರು ಒಬ್ಬ ಮಾನವೀಯ ಕಳಕಳಿ ಇರುವ ವ್ಯಕ್ತಿ. ಪ್ರಾಣಿಗೂ ಯಾವುದೇ ಸಮಸ್ಯೆ ಮಾಡದ ವ್ಯಕ್ತಿ. ಅವರಿಗೆ ನಾನು ಶಬ್ದಗಳಲ್ಲಿ ಸಂತಾಪ ಸೂಚಿಸುವುದಿಲ್ಲ ಎಂದರು.