ನವದೆಹಲಿ: ನೈಟ್‍ಕ್ಲಬ್ ಒಂದರ ಲಿಫ್ಟ್‌ನಲ್ಲಿ 10 ಮಂದಿ ಸುಮಾರು 10 ಗಂಟೆಗಳ ಕಾಲ ಸಿಲುಕಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಹಲವು ಗಂಟೆಗಳ ಕಾಲ ನಡೆದ ಕಠಿಣ ಕಾರ್ಯಾಚರಣೆಯ ನಂತರ ಅವರನ್ನು ರಕ್ಷಿಸಲಾಗಿದೆ.
ಅಗ್ನಿಶಾಮಕ ಇಲಾಖೆಗೆ ಭಾನುವಾರ ಮುಂಜಾನೆ 6 ಗಂಟೆ ವೇಳೆಗೆ ಈ ಬಗ್ಗೆ ಕರೆ ಬಂದಿದೆ. ಸೌತ್ ಎಕ್ಸ್‍ನಲ್ಲಿರುವ ಕ್ಲಬ್‍ನ ಲಿಫ್ಟ್‌ನಲ್ಲಿ 10 ಮಂದಿ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ಲಿಫ್ಟ್‌ನಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಈ ಬಗ್ಗೆ ದೆಹಲಿ ಅಗ್ನಿಶಾಮಕ ದಳದ ನಿರ್ದೇಶಕ ಅತುಲ್ ಗಾರ್ಗ್ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯಿಂದ ವ್ಯಕ್ತಿಗಳು ತಡರಾತ್ರಿ ಪಾರ್ಟಿಗಾಗಿ ಕ್ಲಬ್‍ಗೆ ಬಂದಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ಲಿಫ್ಟ್‌ನಲ್ಲಿದ್ದಾರೆ ಸಿಲುಕಿದ್ದಾರೆ. ಕೀ ಬಳಸಿಕೊಂಡು ಲಿಫ್ಟ್‌ನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಲಿಫ್ಟ್‌ನಲ್ಲಿದ್ದ ಜನರು ಕ್ಲಬ್‍ನ ಆಡಳಿತ ಮಂಡಳಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಲಿಫ್ಟ್‌ನೊಳಗೆ ಹಲವರು ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಡರಾತ್ರಿಯ ಸಮಯದಲ್ಲಿ ಕ್ಲಬ್ ತೆರೆಯಲು ಪರವಾನಗಿ ಹೊಂದಿದೆಯೇ, ಇಲ್ಲವೇ ಎಂಬ ವಿಚಾರವಾಗಿ ದೆಹಲಿ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.