ಶಿರಸಿ: ಆ. 10 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಲಿದ್ದು, ಈ ವೇಳೆ ಜಿಲ್ಲೆಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಘೋಷಿಸುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಬುಧವಾರ ನಗರಕ್ಕೆ ಆಗಮಿಸಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಕಾರವಾರದಲ್ಲಿ ಟ್ರಾಮಾ ಸೆಂಟರ್ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಯವರೇ ಸೂಚಿಸಿದ್ದಾರೆ. ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆ ಇದ್ದು, ಈ ಬಗ್ಗೆ ಸಾರ್ವಜನಿಕರ ಬೇಡಿಕೆಯೂ ಇದೆ. ಆಸ್ಪತ್ರೆ ಸ್ಥಾಪಿಸಲು ಸರ್ಕಾರವೂ ಸಿದ್ಧವಿದೆ ಎಂದರು.
ಜಿಲ್ಲೆಯ ಎಲ್ಲರಿಗೂ ಸಮೀಪವಾಗುವ ಸ್ಥಳವೆಂದರೆ ಸಿದ್ದಾಪುರ ಅಥವಾ ಕುಮಟಾ. ಕುಮಟಾದಲ್ಲಿ ಅಗತ್ಯ ಭೂಮಿಯನ್ನೂ ನೋಡಿದ್ದೇವೆ. ಸುಮಾರು 15 ರಿಂದ 20 ಎಕರೆ ಭೂಮಿಯನ್ನು ಮೀಸಲಿರಿಸುವ ಕಾರ್ಯವನ್ನು ಈ ವಾರದಲ್ಲಿ ಪೂರ್ಣಗೊಳಿಸಲಿದ್ದೇವೆ. ಈ ಕುರಿತಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಜೊತೆಯಲ್ಲಿಯೂ ಮಾತನಾಡಿದ್ದೇನೆ ಎಂದರು.