ಮಂಗಳೂರು: ಮುಂಗಾರು ಆರಂಭವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕ ಮಳೆಯಾಗಿದೆ. ಇದೀಗ ಮಳೆ ಅಬ್ಬರ ನಿಂತರೂ ಕಡಲ್ಕೊರೆತ ನಿಂತಿಲ್ಲ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದೆ. ಇದರಿಂದ ಆಟದ ಮೈದಾನ, ತಾತ್ಕಾಲಿಕವಾಗಿ ಅಳವಡಿಸಿದ್ದ ವೈಟ್ ಸ್ಯಾಂಡ್ ಬ್ಯಾಗ್ ಸಮುದ್ರಪಾಲಾಗಿದೆ. ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಪ್ರಾಕೃತಿಕ ರಕ್ಷಾ ಕವಚ ಯೋಜನೆ ಜಾರಿಗೆ ಮುಂದಾಗಿದೆ.
ಈ ಬಗ್ಗೆ ದಕ್ಷಿಣಕನ್ನಡ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ದಿನೇಶ್ ಕುಮಾರ್ ಮಾತನಾಡಿ ರಾಜ್ಯ 320 ಕಿಮೀ ಉದ್ದದ ಕಡಲ ತೀರವನ್ನು ಹೊಂದಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಈ ಯೋಜನೆಯನ್ನು ಮಂಗಳೂರಿನಲ್ಲಿ ಅನುಷ್ಠಾನ ಮಾಡಿದ್ದೇವೆ. ವರ್ಷದಿಂದ ವರ್ಷಕ್ಕೆ ಕಡಲ್ಕೊರೆತ ಸಮಸ್ಯೆ ಹೆಚ್ಚಾಗಿ ಭೂಮಿ ಸಮುದ್ರದ ಪಾಲಾಗುತ್ತಿದೆ. ಪ್ರಕೃತಿಯ ರೌದ್ರಾವತಾರವನ್ನು ತಣಿಸೋದು ಪ್ರಕೃತಿಗೆ ಮಾತ್ರ ಸಾಧ್ಯ ಎಂದು ಹೇಳಿದರು.
ಎಲ್ಲೆಲ್ಲಿ ಪ್ರಾಕೃತಿಕವಾಗಿ ಗಿಡ, ಮರಗಳು ಬೆಳೆದುಕೊಂಡಿದೆಯೋ ಅಂತಹ ಪ್ರದೇಶಗಳಲ್ಲಿ ಕಡಲ್ಕೊರೆತ ಸಂಭವಿಸುತ್ತಿಲ್ಲ. ಎಲ್ಲೆಲ್ಲಿ ಮರ, ಗಿಡಗಳನ್ನು ನಾಶಮಾಡಿ ಮನೆ, ರಸ್ತೆ ನಿರ್ಮಾಣವಾಗಿದೆ ಅಲ್ಲಿ ಮಾತ್ರ ಕಡಲ್ಕೊರೆತ ಉಂಟಾಗಿದೆ. ಹೀಗಾಗಿ ಈ ಪ್ರಾಕೃತಿಕ ರಕ್ಷಾ ಕವಚ ಕಡಲ್ಕೊರೆತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನೈಸರ್ಗಿಕವಾಗಿ ಬೆಳೆದಿರುವ ರಕ್ಷಾ ಕವಚ ಇರುವಲ್ಲಿಯೂ ಕೊರೆತ ಉಂಟಾಗಲ್ಲ. ಸಮುದ್ರದ ಪಕ್ಕವೇ ಭೂ ಪ್ರದೇಶ ಇದ್ದರೂ ಕಡಲ್ಕೊರೆತ ಉಂಟಾಗಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಅಧ್ಯಯನ ನಡೆಸಿ ಈ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ ಕರಾವಳಿಯ ಬೇರೆ ಭಾಗಕ್ಕೂ ಇದನ್ನು ವಿಸ್ತರಣೆ ಮಾಡಬಹುದು. ಕಡಲ್ಕೊರೆತ ತಡೆಯುವ ಜೊತೆ ಹಸಿರು ಪರಿಸರವು ನಿರ್ಮಾಣ ಆಗುತ್ತೆ ಎಂದರು.