ಒಂದು ಸಿನಿಮಾ ಸೂಪರ್ ಹಿಟ್ ಆದರೆ ಅದೇ ರೀತಿಯಲ್ಲಿ ಮತ್ತಷ್ಟು ಸಿನಿಮಾಗಳನ್ನು ಮಾಡಲಾಗುತ್ತದೆ. ಹೀಗೆ ಟ್ರೆಂಡ್ ಫಾಲೋ ಮಾಡುವ ಅಭ್ಯಾಸ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಎಲ್ಲರಿಗೂ ಗೆಲುವು ದಕ್ಕುವುದಿಲ್ಲ. 2022ರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಂಡಿತು. ಅದೇ ಮಾದರಿಯಲ್ಲಿ ಮೂಡಿಬಂದ ದಿ ಕೇರಳ ಸ್ಟೋರಿ ಚಿತ್ರ 2023ರ ಮೇ ತಿಂಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಅದರ ಛಾಯೆಯಲ್ಲೇ ಮೂಡಿಬಂದ ಮತ್ತೊಂದು ಸಿನಿಮಾ ‘72 ಹೂರೇ’ ಕೂಡ ಸಾಕಷ್ಟು ಹೈಪ್ ಸೃಷ್ಟಿ ಮಾಡಿತ್ತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ಎಷ್ಟೇ ವಿವಾದ ಮಾಡಿಕೊಂಡರೂ ಜನರು ‘72 ಹೂರೇ’ ಕಡೆಗೆ ಆಸಕ್ತಿ ತೋರಿಸುತ್ತಿಲ್ಲ. ಸದ್ಯಕ್ಕೆ ಈ ಸಿನಿಮಾದ ಬಾಕ್ಸ್ ಆಫೀಸ್ (72 Hoorain Box Office Collection) ಪರಿಸ್ಥಿತಿ ಹೀನಾಯವಾಗಿದೆ..
ಜುಲೈ 7ರಂದು ‘72 ಹೂರೇ’ ಸಿನಿಮಾ ಬಿಡುಗಡೆ ಆಯಿತು. ರಿಲೀಸ್ಗೂ ಮುನ್ನ ವಿವಾದ ಸೃಷ್ಟಿಯಾಗಿದ್ದರಿಂದ ಒಳ್ಳೆಯ ಓಪನಿಂಗ್ ಸಿಗಬಹುದು ಎಂದು ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ದೇಶಾದ್ಯಂತ ಬಿಡುಗಡೆ ಆಗಿದ್ದರೂ ಕೂಡ ‘72 ಹೂರೇ’ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗಿಲ್ಲ. ಮೂಲಗಳ ಪ್ರಕಾರ ಮೊದಲ ದಿನ ಈ ಸಿನಿಮಾ ಗಳಿಸಿದ್ದು ಕೇವಲ 36 ಲಕ್ಷ ರೂಪಾಯಿ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಬೇಸರ ಮೂಡಿಸಿದೆ.
ಎರಡನೇ ದಿನವಾದರೂ ಏನಾದರೂ ಬೆಳವಣಿಗೆ ಆಗಬಹುದು ಎಂದು ಊಹಿಸಲಾಯಿತು. ಅದು ಕೂಡ ಸಾಧ್ಯವಾಗಿಲ್ಲ. ಜುಲೈ 8ರಂದು ‘72 ಹೂರೇ’ ಚಿತ್ರಕ್ಕೆ ಕೇವಲ 45 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ವೀಕೆಂಡ್ನಲ್ಲಿಯೇ ಸಿನಿಮಾದ ಪರಿಸ್ಥಿತಿ ಹೀಗಾದರೆ ಇನ್ನು ವಾರದ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂಬುದು ಬಾಕ್ಸ್ ಆಫೀಸ್ ಲೆಕ್ಕಾಚಾರ ಬಲ್ಲವರ ಅಭಿಪ್ರಾಯ. ಎರಡು ದಿನ ಕಳೆದರೂ ಈ ಸಿನಿಮಾ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಹೆಣಗಾಡುತ್ತಿದೆ. ಹಾಕಿದ ಬಂಡವಾಳ ಮರಳಿ ಸಿಗುವುದು ಕೂಡ ಕಷ್ಟವಾಗಿದೆ.
ಮುಸ್ಲಿಂ ಯುವಕರನ್ನು ಭಯೋತ್ಪಾದನೆಗೆ ತಳ್ಳುವುದರ ಹಿಂದಿನ ಹುನ್ನಾರದ ಕುರಿತು ‘72 ಹೂರೇ’ ಚಿತ್ರದಲ್ಲಿ ವಿವರಿಸಲಾಗಿದೆ. ಈ ಚಿತ್ರದ ಟ್ರೇಲರ್ಗೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿತ್ತು. ಆ ಕಾರಣದಿಂದ ಈ ಸಿನಿಮಾ ಸಖತ್ ಚರ್ಚೆ ಹುಟ್ಟುಹಾಕಿತ್ತು. ಸಂಜಯ್ ಪುರಾಣ್ ಸಿಂಗ್ ಚೌಹಾಣ್ ಅವರು ‘72 ಹೂರೇ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಪವನ್ ಮಲ್ಹೋತ್ರಾ, ಆಮಿರ್ ಬಶೀರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.