ಬಾಗಲಕೋಟ: ಬಕ್ರೀದ್ ಹಬ್ಬದಂದು ಜಿಲ್ಲೆಯ ಬಾದಾಮಿ ತಾಲೂಕಿನ ಹೊರವಲಯದಲ್ಲಿ ಗೋವುಗಳನ್ನು ಹತ್ಯೆ ಮಾಡಲಾಗಿದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಗೋ ಹತ್ಯೆ ನಿಷೇಧ ಕಾನೂನು ಹಿಂಪಡೆಯಬಾರದು ಜೊತೆಗೆ ಕಾನೂನನ್ನು ಇನ್ನು ಹೆಚ್ಚು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಗಳು ಗುಳೇದಗುಡ್ಡ ಬಂದ್ ಕರೆ ಕೊಟ್ಟಿವೆ.
ಅಮರೇಶ್ವರ ಮಠದ ನೀಲಕಂಠ ಸ್ವಾಮೀಜಿ, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮೀಜಿ, ಗುರುಸಿದ್ದೇಶ್ವರ ಮಠದ ಗುರುಬಸವ ದೇವರು, ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಗೋಮಾತೆಗೆ ಆಹಾರ ತಿನ್ನಿಸುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಗುಳೇದಗುಡ್ಡ ಪಟ್ಡಣದ ಬನ್ನಿಕಟ್ಟಿಯ ತ್ರಯಂಬಕೇಶ್ವರ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ಮೆರವಣಿಗೆ ಉದ್ದಕ್ಕೂ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಬಾದಾಮಿ ಪಟ್ಟಣದ ಹೊರವಲಯದಲ್ಲಿ ಗೋ ಹತ್ಯೆ
ಬಕ್ರೀದ್ ಹಬ್ಬದಂದು ಬಾದಾಮಿ ಪಟ್ಟಣದ ಹೊರವಲಯದಲ್ಲಿ ಗೋವುಗಳನ್ನು ಹತ್ಯೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಈ ವೇಳೆ ಗೋ ಹತ್ಯೆಗೈದವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದ್ದರು.
ಸಹಸ್ರಾರು ಹಿಂದೂ ಕಾರ್ಯಕರ್ತರು ಬಾದಾಮಿ ಪಟ್ಟಣದಲ್ಲಿ ಸೇರಿ ಬಾದಾಮಿಯ ರಾಮದುರ್ಗ ಸರ್ಕಲ್ನಿಂದ ಬಸವೇಶ್ವರ ಸರ್ಕಲ್ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದ್ದರು. ಸಹಸ್ರಾರು ಹಿಂದೂ ಕಾರ್ಯಕರ್ತರು ಬಾದಾಮಿ ಪಟ್ಟಣದಲ್ಲಿ ಸೇರಿ ಬಾದಾಮಿಯ ರಾಮದುರ್ಗ ಸರ್ಕಲ್ನಿಂದ ಬಸವೇಶ್ವರ ಸರ್ಕಲ್ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಚರ್ಚೆ ನಡೆಸಿದ್ದರು.
ಬಳಿಕ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಮತ್ತು ಎರಡು ಗೋವುಗಳನ್ನು ರಕ್ಷಣೆ ಮಾಡಿದ್ದರು. ಒಂದು ಗೋವನ್ನು ಹತ್ಯೆ ಮಾಡಲಾಗಿತ್ತು. ಒಟ್ಟು ಮೂರು ಗೋವುಗಳನ್ನು ಹತ್ಯೆ ಮಾಡಲು ಮುಂದಾಗಿದ್ದರು. ಈ ವೇಳೆ ಪೊಲೀಸರು ತೆರಳಿ ಎರಡು ಗೋವುಗಳನ್ನು ರಕ್ಷಣೆ ಮಾಡಿ, ಗೋಶಾಲೆಗೆ ಬಿಟ್ಟಿದ್ದರು. ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.