ಬೆಂಗಳೂರು ಗ್ರಾಮಾಂತರ: ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮರನ್ನ ಆನೇಕಲ್(Anekal) ಉಪವಿಭಾಗದ ಹೆಬ್ಬಗೋಡಿ ಪೋಲೀಸರು ಬಂಧಿಸಿದ್ದಾರೆ. ಆನೇಕಲ್ ತಾಲ್ಲೂಕಿನ ಜಿಗಣಿ ಬಳಿಯ ಕೊಪ್ಪ ಗೇಟ್ ನಿವಾಸಿಗಳಾದ ಹರೀಶ್ ಅಲಿಯಾಸ್ ಗೆಂಡೆ(24), ಸಲ್ಮಾನ್ (24) ಬಂಧಿತ ಆರೋಪಿಗಳು. ಬಂಧಿತರಿಂದ 42 ಗ್ರಾಂ ತೂಕದ ಎರಡು ಚಿನ್ನದ ಸರ ಸೇರಿದಂತೆ 2 ದ್ವಿಚಕ್ರ ವಾಹನ ಮತ್ತು 2 ಮೊಬೈಲ್ ಪೋನ್ನ್ನು ವಶಕ್ಕೆ ಪಡೆಯಲಾಗಿದೆ.
ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುವವರನ್ನ ಟಾರ್ಗೆಟ್ ಮಾಡುತ್ತಿದ್ದ ಅಸಾಮಿಗಳು
ಇನ್ನು ಈ ಖತರ್ನಾಕ್ ಕಳ್ಳರು ಕ್ಷಣಾರ್ಧದಲ್ಲಿ ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುವವರನ್ನ ಟಾರ್ಗೆಟ್ ಮಾಡಿ, ಕೈಚಳಕ ತೋರಿಸಿ ಎಸ್ಕೇಪ್ ಆಗುತ್ತಿದ್ದರು. ಈ ಹಿಂದೆ ಇದೇ ರೀತಿಯ ಹಲವು ಕೃತ್ಯಗಳನ್ನ ಎಸಗಿ ಜೈಲಿಗೂ ಕೂಡ ಈ ಆರೋಪಿಗಳು ಹೋಗಿದ್ದರು. ಆದರೂ, ಹಳೆ ಚಾಳಿಯನ್ನು ಬಿಡದೇ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದರು. ಕಳೆದ 3ನೇ ತಾರೀಖಿನಂದು ಹುಲಿಮಂಗಲ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕುಮಾರನ್ ಎಂಬುವವರನ್ನ ಅಡ್ಡಗಟ್ಟಿ ರಾಬರಿ ಮಾಡಿದ್ದರು. ಈ ವೇಳೆ 30 ಗ್ರಾಂ ತೂಕದ ಚಿನ್ನದ ಚೈನ್, ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದರು
ಪೋಲೀಸರ ತನಿಖೆಯಲ್ಲಿ ಮತ್ತಷ್ಟು ಪ್ರಕರಣಗಳು ಬೆಳಕಿಗೆ
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹೆಬ್ಬಗೋಡಿ ಪೋಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಪೋಲೀಸರ ತನಿಖೆಯಲ್ಲಿ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ಹಲವು ಪೋಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಇದೀಗ ಆರೋಪಿಗಳನ್ನ ಬಂಧಿಸಿ ಹೆಬ್ಬಗೋಡಿ ಪೋಲೀಸರು ಜೈಲಿಗೆ ಕಳುಹಿಸಿದ್ದಾರೆ.