ಮುರುಘಾ ಮಠಕ್ಕೆ ಜಿಲ್ಲಾ ನ್ಯಾಯಾಧೀಶರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ ಹೈಕೋರ್ಟ್

ಬೆಂಗಳೂರು: ಮುರುಘಾಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿ ಹೈಕೋರ್ಟ್ ಮುಖ್ಯಪೀಠ ಆದೇಶ ಮಾಡಿದೆ.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಅಧಿಕಾರ ವಹಿಸಿಕೊಳ್ಳಲು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ. ಎಂ.ಜಿ.ಎಸ್ ಕಮಲ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. ಈ ಹಿಂದೆ ಏಕಸದಸ್ಯ ಪೀಠ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ರದ್ದುಪಡಿಸಿತ್ತು. ಇದಾದ ಬಳಿಕ ಹಿಂದಿನ ಸರ್ಕಾರ ವಸ್ತ್ರದ್ ಅವರ ನೇಮಕ ರದ್ದು ಮಾಡಿ ಆದೇಶ ಮಾಡಿತ್ತು. ಏಕ ಸದಸ್ಯ ಪೀಠದ ಆದೇಶಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯಪೀಠ ಈ ಆದೇಶ ನೀಡಿದೆ. 

ಜುಲೈ 18 ರಂದು ಮೇಲ್ಮನವಿ ವಿಚಾರಣೆ ನಡೆಯಲಿದ್ದು, ಮುಂದಿನ ಆದೇಶದವರೆಗೆ ಚಿತ್ರದುರ್ಗ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.

ಮಠ, ವಿದ್ಯಾಪೀಠದ ದಿನನಿತ್ಯದ ವ್ಯವಹಾರ ನೋಡಿಕೊಳ್ಳಬೇಕು. ಯಾವುದೇ ನೀತಿ ನಿರ್ಧಾರದ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಚಿತ್ರದುರ್ಗ ಜಿಲ್ಲಾಧಿಕಾರಿ ಜಿಲ್ಲಾ ನ್ಯಾಯಾಧೀಶರಿಗೆ ಸಹಕಾರ ನೀಡಬೇಕು. ಅಲ್ಲದೇ ಜಿಲ್ಲಾ ನ್ಯಾಯಾಧೀಶರು ಕೋರಿದ ಸಹಕಾರ ನೀಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.