ಊರ್ವಶಿ ಥಿಯೇಟರ್​ ಮಾಲಿಕ, ನಿರ್ಮಾಪಕ ಕೆಸಿಎನ್​ ಮೋಹನ್​ ನಿಧನ: ಕಂಬನಿ ಮಿಡಿದ ಚಿತ್ರರಂಗ

ಸ್ಯಾಂಡಲ್​ವುಡ್​ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದ ಹಿರಿಯ ನಿರ್ಮಾಪಕ, ಪ್ರದರ್ಶಕ ಕೆಸಿಎನ್​ ಮೋಹನ್​  ಅವರು ನಿಧನರಾಗಿದ್ದಾರೆ. ಅವರು ಕೊನೆಯುಸಿರೆಳೆದ ಸುದ್ದಿ ಕೇಳಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಹಲವಾರು ಸಿನಿಮಾಗಳನ್ನು ಕೆಸಿಎನ್​ ಮೋಹನ್​ ನಿರ್ಮಾಣ ಮಾಡಿದ್ದರು. ನವರಂಗ್​, ಊರ್ವಶಿ ಚಿತ್ರಮಂದಿರಗಳ ಮಾಲೀಕರಾಗಿದ್ದ ಅವರು ಪ್ರದರ್ಶಕರಾಗಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು. ಇತ್ತೀಚೆಗೆ ಮೋಹನ್​ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ವೈಪಲ್ಯದಿಂದ  ಕೆಸಿಎನ್​ ಮೋಹನ್​ ನಿಧನರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅವರಿಗೆ 63 ವರ್ಷ ವಯಸ್ಸಾಗಿತ್ತು

ರಮ್ಯಾ ದಿವ್ಯ ಸ್ಪಂದನಾ ನಟನೆಯ ‘ಜೂಲಿ’, ‘ರಾಮರಾಜ್ಯದಲ್ಲಿ ರಾಕ್ಷಸರು’, ‘ಜಯಸಿಂಹ’, ‘ಧರ್ಮ ಯುದ್ಧ’, ಶಂಕರ್​ ನಾಗ್​ ನಟನೆ ‘ಭಲೇ ಚತುರು’  ಮುಂತಾದ ಸಿನಿಮಾಗಳನ್ನು ಕೆಸಿಎನ್​ ಮೋಹನ್​ ಅವರು ನಿರ್ಮಾಣ ಮಾಡಿದ್ದರು. ಸಿನಿಮಾ ವಿತರಣೆಯಲ್ಲಿ ಅವರು ಪಳಗಿದ್ದರು. ಮೋಹನ್​ ಅವರ ತಂದೆ ಕೆಸಿಎನ್​ ಗೌಡ ಕೂಡ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಡಾ. ರಾಜ್​ಕುಮಾರ್​ ನಟನೆಯ ಹಲವು ಸಿನಿಮಾಗಳಿಗೆ ಕೆಸಿಎನ್​ ಗೌಡ ಅವರು ಬಂಡವಾಳ ಹೂಡಿದ್ದರು.

ಕಪ್ಪು ಬಿಳುಪಿನಲ್ಲಿ ಮೂಡಿಬಂದಿದ್ದ ರಾಜ್​ಕುಮಾರ್​ ನಟನೆಯ ‘ಸತ್ಯ ಹರಿಶ್ಚಂದ್ರ’ ಮತ್ತು ‘ಕಸ್ತೂರಿ ನಿವಾಸ’ ಸಿನಿಮಾವನ್ನು ಕಲರ್​ಗೆ ಪರಿವರ್ತಿಸಿ ಬಿಡುಗಡೆ ಮಾಡಿದ ಖ್ಯಾತಿ ಕೆಸಿಎನ್​ ಮೋಹನ್​ ಅವರಿಗೆ ಸಲ್ಲುತ್ತದೆ. ಮೋಹನ್​ ಅವರ ಪತ್ನಿ ರೇಣುಕಾ ಮೋಹನ್ ಅವರು ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದರು. ‘ಜೂಲಿ’ ಸಿನಿಮಾ ಮೂಡಿಬಂದಿದ್ದು ರೇಣುಕಾ ಅವರ ನಿರ್ದೇಶನದಲ್ಲಿ. 2017ರಲ್ಲಿ ರೇಣುಕಾ ನಿಧನರಾದರು.