ಮಹಾರಾಷ್ಟ್ರದಲ್ಲಿ ಭೀಕರ ಬಸ್ ಅಪಘಾತ, ಮೃತರ ಕುಟುಂಬಗಳಿಗೆ 2 ಲಕ್ಷ, ಗಾಯಳುಗಳಿಗೆ 50ಸಾವಿರ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಮಹಾರಾಷ್ಟ್ರ ದ ಬುಲ್ಧಾನದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 26 ಜನರು ಸಾವನ್ನಪ್ಪಿದ್ದು, ಇದೀಗ ಅವರಿಗೆ ದೇಶ ಪ್ರಧಾನಿ ಸಂತಾಪ ಸೂಚಿಸಿದ್ದು, ಸಾವನ್ನಪ್ಪಿರುವರ ಕುಟುಂಬಗಳಿಗೆ 2 ಲಕ್ಷ ಮತ್ತು ಗಾಯಗೊಂಡವರಿಗೆ 50 ಸಾವಿರ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಅಪಘಾತದ ಬಗ್ಗೆ ಈಗಾಗಲೇ ಮಾಹಿತಿ ಪಡೆದಿದ್ದು, ರಾಜ್ಯ ಸರ್ಕಾರವು ಕೂಡ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ನಾನು ದೇವರಲ್ಲಿ ಪ್ರಾರ್ಥನೆ ಮಾಡುವೆ, ಸಾವನ್ನಪ್ಪಿರುವವ ಕುಟುಂಬಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ. ಜತೆಗೆ ಗಾಯಗೊಂಡಿರುವವರು ಶೀಘ್ರವಾಗಿ ಗುಣಮುಖವಾಗಿ ಬರಲಿ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.

ಇಂದು ಮುಂಜಾನೆ ಬುಲ್ಧಾನಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್ಸೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು , 26 ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಇತರ ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಜನರನ್ನು ಸಹಾಯಕ್ಕಾಗಿ ಅಂಗಲಾಚಿದರೂ ಯಾರೊಬ್ಬರು ಕೂಡ ಸಹಾಯಕ್ಕೆ ಬಂದಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಪೊಲೀಸರು ಶಂಕಿಸಿರುವ ಪ್ರಕಾರ ನಾಗ್ಪುರದಿಂದ ಪುಣೆಗೆ ತೆರಳುತ್ತಿದ್ದ ಬಸ್ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದು, ಅಲ್ಲಿದ್ದ ಡಿವೈಡರ್​ಗೂ ಕೂಡ ಡಿಕ್ಕಿ ಹೊಡೆದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದ್ದಾರೆ. ಆದರೆ ಬಸ್ ಚಾಲಕ ಟೈರ್ ಒಡೆದು ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 34 ಪ್ರಯಾಣಿಕರಲ್ಲಿ 26 ಜನರು ಸಾವನ್ನಪ್ಪಿದ್ದು ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.