ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ: ಡಿಕೆಶಿ ಸ್ಪಷ್ಟನೆ; ಪ್ರಾಧಿಕಾರ ರಚನೆಗೆ ಸುಪ್ರೀಂ ಡೆಡ್‌ಲೈನ್‌!

ಹೊಸದಿಲ್ಲಿ/ಬೆಂಗಳೂರು: ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲದ ಕಾರಣ ನೆರೆಯ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಕರ್ನಾಟಕ ಶುಕ್ರವಾರ ಹೇಳಿದೆ. ನ್ಯಾಯಾಧಿಕರಣ ರಚನೆಗೆ ಸುಪ್ರೀಂ ಕೋರ್ಟ್‌ ಜುಲೈ 5 ರ ನಿರ್ದೇಶನ ನೀಡಿದ್ದರೂ, ಸದ್ಯ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

“ನಮ್ಮ ಕುಡಿಯುವ ಅಗತ್ಯಗಳನ್ನು ಪೂರೈಸಲು ಸಾಕಷ್ಟು ನೀರಿಲ್ಲ. ಮುಂಗಾರು ವಿಳಂಬದಿಂದಾಗಿ ತೀವ್ರ ಕೊರತೆಯಿದೆ” ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಒಂದು ದಿನದ ನಂತರ ಹೇಳಿಕೆ ನೀಡಿದ್ದಾರೆ. ಅಲ್ಲದೆ, ನೀರು ಬಿಡುಗಡೆ ಮಾಡಲು ಬಯಸಿದರೂ ನಮಗೆ ನೀರಿಲ್ಲ, ಬೆಂಗಳೂರು ನಗರವೂ ಕಾವೇರಿ ನದಿಯ ಮೇಲೆ ಅವಲಂಬಿತವಾಗಿದೆ ಎಂದೂ ಉಪ ಮುಖ್ಯಮಂತ್ರಿಯೂ ಆಗಿರುವ ಡಿಕೆಶಿ ಹೇಳಿದ್ದಾರೆ.

ಕರ್ನಾಟಕವು ಕೇಂದ್ರ ಮತ್ತು ವಿವಿಧ ರಾಜ್ಯಗಳ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆಯನ್ನು ಆಯೋಜಿಸಲಿದ್ದು, ಜುಲೈ 8 – 9 ರಂದು ಈ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಈ ಸಭೆಗೆ ಮಂಡ್ಯದ ಕೆಆರ್‌ಎಸ್ ಡ್ಯಾಂ ಬಳಿ ಸ್ಥಳವನ್ನು ಹುಡುಕಲು ನಾನು ಅಧಿಕಾರಿಗಳನ್ನು ಕೇಳಿದ್ದೇನೆ. ಇದರಿಂದಾಗಿ ತಮಿಳುನಾಡು ಮತ್ತು ಕೇಂದ್ರ ಅಧಿಕಾರಿಗಳು ನೈಜ ಪರಿಸ್ಥಿತಿಯನ್ನು ನೋಡಬಹುದು ಎಂದೂ ಡಿಕೆಶಿ ಹೇಳಿದರು.