ಬೆಂಗಳೂರು: ಕೇಂದ್ರ ಸರ್ಕಾರ ನಿರ್ಬಂಧ ಪ್ರಶ್ನಿಸಿ ಟ್ವಿಟ್ಟರ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೇ ಟ್ವಿಟ್ಟರ್ ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಿ ಇಂದು (ಜೂನ್ 30) ಹೈಕೋರ್ಟ್ ಆದೇಶ ಹೊರಡಿಸಿದೆ. 45 ದಿನಗಳಲ್ಲಿ 50 ಲಕ್ಷ ರೂ. ದಂಡದ ಮೊತ್ತವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ತಡವಾದರೆ ಪ್ರತಿದಿನ 5 ಸಾವಿರ ದಂಡ ವಿಧಿಸಬೇಕಾಗುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಎಚ್ಚರಿಕೆ ನೀಡಿದರು.
ಆಕ್ಷೇಪಾರ್ಹ ಪೋಸ್ಟ್ ತೆಗೆಯಲು ಕೇಂದ್ರ ಸರ್ಕಾರದ ನೀಡಿದ್ದ ಸೂಚನೆಯನ್ನು ಪ್ರಶ್ನಿಸಿ ಟ್ವಿಟ್ಟರ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಟ್ವಟ್ಟರ್, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆದ್ರೆ, ಈ ಅರ್ಜಿ ಹೈಕೋರ್ಟ್ ವಜಾ ಮಾಡಿದೆ. ಕೇಂದ್ರ ಸರ್ಕಾರದ ನೋಟಿಸ್ನ್ನು ಟ್ವಿಟರ್ ಸಂಸ್ಥೆ ಪಾಲಿಸಿಲ್ಲ. ಸೂಚನೆ ಪಾಲಿಸದಿದ್ದರೆ 7 ವರ್ಷ ಶಿಕ್ಷೆ, ದಂಡವಿದೆ. ಆದರೂ ಟ್ವಿಟರ್ ಸಂಸ್ಥೆ ಸೂಚನೆಗಳನ್ನು ಪಾಲಿಸಿಲ್ಲ. 1 ವರ್ಷ ವಿಳಂಬದ ನಂತರ ಸೂಚನೆ ಪಾಲಿಸಿ ಕೋರ್ಟ್ಗೆ ಬಂದಿದ್ದೀರಿ. ನೀವು ರೈತರಲ್ಲ, ಶ್ರೀಮಂತ ಸಂಸ್ಥೆ ಎಂಬುದು ತಿಳಿದಿರಲಿ ಎಂದು ಟ್ವಿಟರ್ ಸಂಸ್ಥೆಗೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ತರಾಟೆಗೆ ತೆಗೆದುಕೊಂಡರು.