ಹಣದ ಆಸೆಗೆ 12 ವರ್ಷದ ಮಗಳನ್ನೇ ಮಾರಾಟ ಮಾಡಿದ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಘಟನೆ ನಡೆದಿದೆ. 40 ಸಾವಿರ ರೂ. ಆಸೆಗೆ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದರು, ವರನಿಗೆ ಈಗ 27 ವರ್ಷ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜೂನ್ 27 ರಂದು ಭೋಪಾಲ್ ಬಳಿಯ ಗುನಗಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ 27 ವರ್ಷದ ಯುವಕನೊಂದಿಗೆ 12 ವರ್ಷದ ಬುಡಕಟ್ಟು ಹುಡುಗಿಯ ವಿವಾಹವನ್ನು ತಡೆದು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಪೋಷಕರು 40,000 ರೂ.ಗೆ ಬಾಲಕಿಯನ್ನು ಮಾರಾಟ ಮಾಡಿ 20 ಸಾವಿರ ರೂ ಮುಂಗಡವಾಗಿ ಪಡೆದಿದ್ದು , ಉಳಿದ ಮೊತ್ತವನ್ನು ಮದುವೆಯ ನಂತರ ಅವರಿಗೆ ನೀಡುವುದಾಗಿ ತಿಳಿಸಿದ್ದರಂತೆ. ಎಸ್ಪಿ ಕಿರಣಲತಾ ಕೆರ್ಕೆಟ್ಟಾ ಮಾತನಾಡಿ, ಜೂನ್ 26 ರಂದು ಗುನಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಾಲ್ಯ ವಿವಾಹದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಮಗೆ ಮಾಹಿತಿ ಬಂದಿತ್ತು, ನಂತರ ನಾವು ಸ್ಥಳಕ್ಕೆ ತಲುಪಿ ನೋಡಿದ್ದೇವೆ.
ಅರಿಶಿಣ ಶಾಸ್ತ್ರ ನಡೆಯುತ್ತಿತ್ತು. ವಿಚಾರಣೆ ನಡೆಸಿದಾಗ ಹುಡುಗಿಗೆ 12 ವರ್ಷ ಮತ್ತು ಆಕೆ ಮದುವೆಯಾಗಲಿರುವ ವ್ಯಕ್ತಿಗೆ 27 ವರ್ಷ ಎಂದು ತಿಳಿದುಬಂದಿದೆ. ಆಕೆಯ ಪೋಷಕರು 40,000 ರೂ ಪಡೆದು, ಮದುವೆಗೆ ಒಪ್ಪಿಗೆ ನೀಡಿದ್ದರು.
ಮಾನವ ಕಳ್ಳಸಾಗಣೆ, ಬಾಲಾಪರಾಧಿ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪ್ರಾಪ್ತ ಬಾಲಕಿಯ ಪೋಷಕರು, ವರ ಮತ್ತು ಅವರ ಪೋಷಕರು ಸೇರಿದಂತೆ ಐವರ ವಿರುದ್ಧ ಇದುವರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ, ದಲ್ಲಾಳಿಗಳಾಗಿ ಕೆಲಸ ಮಾಡಿದವರು ಅಥವಾ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.