ಬೆಂಗಳೂರು (ಜೂ.28): ಅನ್ನಭಾಗ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ಬೆನ್ನಲ್ಲಿಯೇ ರಾಜ್ಯ ಸರ್ಕಾರ ವಿವಿಧ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುವ ಪ್ರಯತ್ನದಲ್ಲಿತ್ತು. ಈ ವೇಳೆ ರಾಜ್ಯ ಬಿಜೆಪಿ ನಾಯಕರು ಅನ್ನಭಾಗ್ಯಕ್ಕೆ ಅಕ್ಕಿ ಖರೀದಿ ಮಾಡಲು ಸಮಸ್ಯೆ ಆದಲ್ಲಿ, ಅಕ್ಕಿ ಖರೀದಿಗೆ ಬಳಸುವ ಹಣವನ್ನು ಫಲಾನುಭವಿಗಳಿಗೆ ನೀಡಿ ಎಂದು ಹೇಳಿತ್ತು. ಇದೇ ವಿಚಾರವನ್ನು ಮಾಧ್ಯಮಗಳು ಸಿದ್ದರಾಮಯ್ಯ ಮುಂದೆ ಪ್ರಸ್ತಾಪ ಮಾಡಿದ್ದಾಗ, ‘ಹಣ ತಿನ್ನೋಕೆ ಆಗುತ್ತೇನ್ರಿ, ಕೊಡೋದೇ ಆದ್ರೆ ಅಕ್ಕಿಯನ್ನೇ ಕೊಡ್ತೇವೆ’ ಎಂದು ಅಬ್ಬರಿಸಿದ್ದರು. ಅದಾದ ಬಳಿಕವೂ ರಾಜ್ಯ ಸರ್ಕಾರ ಅಕ್ಕಿ ಖರೀದಿ ಮಾಡುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನೂ ಮಾಡಿತ್ತು. ರಾಜ್ಯದಲ್ಲಿ ಅಕ್ಕಿ ದಾಸ್ತಾನಿನ ಕೊರತೆ ಹಾಗೂ ವಿವಿಧ ರಾಜ್ಯಗಳಿಂದ ಅಗತ್ಯ ಅಕ್ಕಿ ಸಿಗದ ಹಿನ್ನಲೆಯಲ್ಲಿ ಬುಧವಾರ ಮಹತ್ವದ ನಿರ್ಧಾರ ಮಾಡಿದ ರಾಜ್ಯ ಸರ್ಕಾರ, ರಾಜ್ಯ ಸರ್ಕಾರದ 5 ಕೆಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ 170 ರೂಪಾಯಿಯನ್ನು ಫಲಾನುಭವಿಗಳಿಗೆ ನೀಡೋದಾಗಿ ಹೇಳಿದೆ. ಈಗ ಬಿಜೆಪಿ ಸಿದ್ಧರಾಮಯ್ಯ ಹೇಳಿದ ಮಾತನ್ನೇ ಹಿಡಿದುಕೊಂಡು ಟೀಕೆ ಮಾಡಲು ಆರಂಭಿಸಿದೆ.
ಬಿಜೆಪಿ ವಕ್ತಾರ ರವಿಕುಮಾರ್ ಸಿಎಂ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಇದೇ ನೈತಿಕತೆ ಇಟ್ಟುಕೊಂಡು ನಾವು ಸದನದಲ್ಲಿ ಹೋರಾಟ ಮಾಡಲಿದ್ದೇವೆ. ರಾಜ್ಯದ ಪ್ರತಿ ಬಿಪಿಎಲ್ ಕುಟುಂಬದವರಿಗೆ 10 ಕೆಜಿ ಅಕ್ಕಿ ಕೊಡ್ತೇನೆ ಎಂದು ಹೇಳಿದ್ರಿ ತಾನೆ. ಹೇಳಿದ ಮಾತಿನಂತೆ 10 ಕೆಜಿ ಅಕ್ಕಿ ಕೊಡಿ. ಇಲ್ಲದಿದ್ದರೆ, ಖುರ್ಚಿ ಖಾಲಿ ಮಾಡಿ ಅಷ್ಟೇ. ಅನ್ನಭಾಗ್ಯ 10 ಕೆಜಿ ಕೊಡ್ತೀವಿ ಅಂತಾ ಹೇಳಿದ್ರಲ್ಲ. ಎಲ್ಲಿ ಹೋಯ್ತು ನಿಮ್ಮ ಅನ್ನಭಾಗ್ಯ. ಬಡವರಿಗೆ ಕೊಡ್ತೀವಿ ನಾವು ಅಂದಿದ್ರಲ್ಲ. ಅದರಂತೆ ಈಗ ಅಕ್ಕಿಯನ್ನು ಕೊಡಿ’ ಎಂದು ಹೇಳಿದ್ದಾರೆ.
ಈಗ ನೋಡಿದರೆ, 5 ಕೆಜಿ ಅಕ್ಕಿಯ ಜೊತೆ ಇನ್ನೈದು ಕೆಜಿಯ ಹಣ ಹಾಕ್ತೀವಿ ಅಂತಿದ್ದೀರಿ. ಈ 5 ಕೆಜಿ ಅಕ್ಕಿಯನ್ನುಕೊಡುತ್ತಿರೋದು ಕೇಂದ್ರ ಸರ್ಕಾರ. ನೀವು ಕೊಡಬೇಖಾಗಿರುವ 10 ಕೆಜಿ ಅಕ್ಕಿಯನ್ನು ಕೊಡಿ. ಈಗ ನೋಡಿದ್ರೆ ಬರೀ 5 ಕೆಜಿ ಅಕ್ಕಿ ಹಣ ಹಾಕುವ ಮಾತನಾಡುತ್ತಿದ್ದೀರಿ. ನೀವು ಹೇಳಿದಂತೆ ನಿಮ್ಮ ಮಾತಿನಂತೆ 10 ಕೆಜಿ ಅಕ್ಕಿ ಕೊಡಿ. ನೀವು, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಗಾ ಗಾಂಧಿ ಎಲ್ಲರೂ ದೊಡ್ಡ ದೊಡ್ಡ ಪೋಸ್ಟ್ ಹಿಡಿದುಕೊಂಡು ಪೋಸ್ ನೀಡಿದ್ರಲ್ಲ. ನೆಟ್ಟಗೆ ಒಂದು ಗ್ಯಾರಂಟಿಯನ್ನ ಸರಿಯಾಗಿ ಈಡೇರಿಸಲು ಆಗುತ್ತಿಲ್ಲ. ಹಾಗಾಗಿ, ನೈತಿಕತೆ ಇಲ್ಲದೇ ಇರುವಂಥ ಸರ್ಕಾರ ನಿಮ್ಮದು. ಅನ್ನಭಾಗ್ಯವನ್ನು ಸಂಪೂರ್ಣವಾಗಿ ನೆಲಕಚ್ಚುವಂತೆ ಮಾಡಿದವರು ನೀವು. ಹಾಗಾಗಿ ಮೊದಲು ನೀವು ರಾಜೀನಾಮೆ ನೀಡಿ’ ಎಂದು ಹೇಳಿದ್ದಾರೆ.
ನಮ್ಮ ನೈತಿಕತೆ ಪ್ರಶ್ನೆ ಮಾಡಿದ್ದೀರಲ್ಲ. ಅದೇ ನೈತಿಕತೆಯನ್ನ ನಾವೀಗ ಪ್ರಶ್ನೆ ಮಾಡುತ್ತಿದ್ದೇವೆ. ಕೊಟ್ಟ ಮಾತಿನಂತೆ ನೀವು ನಡೆಯಿರಿ. ಇಲ್ಲದಿದ್ದರೆ ನಾವು ಹೋರಾಟವನ್ನು ಮಾಡ್ತೇವೆ. ಸದನದ ಒಳಗಡೆ ಹಾಗೂ ಹೊರಗಡೆ ಎರಡೂ ಕಡೆ ಪ್ರತಿಭಟನೆ ಮಾಡ್ತೀವಿ. 10 ಕೆಜಿ ಅಕ್ಕಿ ಅಂತಾ ಏನು ಹೇಳಿದ್ರಿ ಅದನ್ನು ಮಾತಿನಂತೆ ಕೊಡಬೇಕು. ಇಲ್ಲದಿದ್ದರೆ ಖುರ್ಚಿ ಕಾಲಿ ಮಾಡಬೇಕು. 5 ಕೆಜಿ ಅಕ್ಕಿ ಕೇಂದ್ರ ಕೊಡ್ತಾ ಇದೆ. ನಿಮ್ಮ 10 ಕೆಜಿ ಅಕ್ಕಿ ಎಲ್ಲಿ ಅಂತಾ ಮಹಿಳೆಯರು ಕೇಳಬೇಕು. ಬಿಜೆಪಿ ಪ್ರತಿ ಮನೆಮನೆಗೂ ಹೋಗಿ 5 ಕೆಜಿ ಅಕ್ಕಿಯ ಬಗ್ಗೆ ಜನರಿಗೆ ತಿಳಿಸಲಿದೆ’ ಎಂದಿದ್ದಾರೆ.
‘ಸಿದ್ದರಾಮಯ್ಯ ಏನ್ ಹೇಳಿದ್ರು, ಹಣ ತಿನ್ನೋಕೆ ಆಗುತ್ತೇನ್ರಿ. ನಾವ್ ಅಕ್ಕೀನೇ ಕೊಡ್ತೀವಿ ಅಂದಿದ್ರು. ಈಗ ಅಕ್ಕಿ ಕೊಡಪ್ಪ ನೋಡ್ತೀನಿ. ಈಗ ಅಕ್ಕಿ ಕೊಡಿ. ಯಾಕೆ ಉಲ್ಟಾ ಹೊಡೆಯುತ್ತಿದ್ದೀರಿ. ಹಾಗಾಗಿ ನೀವು, ಬಡವರಿಗೆ ಮೋಸ ಮಾಡಿದ್ದೀರಿ. ಬಡವರಿಗೆ ಮಾಡಿದ ಈ ಮೋಸದ ವಿರುದ್ಧ ರಾಜ್ಯಾದ್ಯಂತ ಹೋರಾಟವನ್ನು ಮಾಡುತ್ತೇವೆ’ ಎಂದು ಬಿಜೆಪಿ ಎಂಎಲ್‌ಸಿಯೂ ಆಗಿರುವ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.