ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಗುರಿ : ಗ್ಯಾಂಗ್ ಸ್ಟರ್ ಗೋಲ್ಡಿ ಬಹಿರಂಗ ಹೇಳಿಕೆ

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಹೇಳಿಕೆ ನೀಡಿದ್ದ. ಅವನ ತಂಡ ಅನೇಕ ಸದಸ್ಯರು ಪೊಲೀಸರ ಕೈಗೆ ಸಿಕ್ಕಿಬಿದ್ದಾಗಲೂ ಸಲ್ಮಾನ್ ಕೊಲ್ಲುವ ಮಾತುಗಳನ್ನು ಅವರು ಆಡಿದ್ದರು. ಹೀಗಾಗಿ ಸಲ್ಮಾನ್ ಖಾನ್ ಅವರಿಗೆ ವಿಶೇಷ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಕೇವಲ ಸಲ್ಮಾನ್ ಗೆ ಮಾತ್ರವಲ್ಲ, ಅವರ ತಂದೆ ಮತ್ತು ಕುಟುಂಬಕ್ಕೆ ಭದ್ರತೆ ನೀಡಲಾಗಿದೆ. ಲಾರೆನ್ಸ್ ತಣ್ಣಗಾದ ಎನ್ನುವ ಹೊತ್ತಿಗೆ ಇದೀಗ ಮತ್ತೊಬ್ಬ ಗ್ಯಾಂಗ್ ಸ್ಟಾರ್ ಸಲ್ಮಾನ್ ಕೊಲ್ಲುವ ಕುರಿತು ಮಾತನಾಡಿದ್ದಾನೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದಿರುವುದು ತಾನೇ ಎಂದು ಹೇಳಿಕೊಂಡಿರುವ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ನನ್ನ ಮುಂದಿನ ಟಾರ್ಗೆಟ್ ಸಲ್ಮಾನ್ ಖಾನ್ ಎಂದು ಹೇಳುವ ಮೂಲಕ ಆತಂಕ ಸೃಷ್ಟಿ ಮಾಡಿದ್ದಾನೆ. ರಾಷ್ಟ್ರೀಯ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಗೋಲ್ಡಿ ಬ್ರಾರ್, ‘ನನ್ನ ಮುಂದಿನ ಗುರಿ ಇರುವುದು ಸಲ್ಮಾನ್ ಖಾನ್ ನನ್ನು ಕೊಲ್ಲುವುದು. ಕೊಂದೇ ಕೊಲ್ಲುತ್ತೇನೆ. ನನ್ನಿಂದ ಅವನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಸಂದರ್ಶನದಲ್ಲಿ ಹೇಳಿದ್ದಾನೆ.

ರಾಷ್ಟ್ರೀಯ ವಾಹಿನಿಯಲ್ಲಿ  ಹಲವು ರಾಜ್ಯಗಳ ಪೊಲೀಸರಿಗೆ ಬೇಕಾಗಿರುವ, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗೋಲ್ಡಿ ಬ್ರಾರ್ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಬಹಿರಂಗವಾಗಿ ಈ ರೀತಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹವೂ ಹೆಚ್ಚಾಗಿದೆ.

ಈಗಾಗಲೇ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು ಬಿಷ್ಣೋಯ್ ಮತ್ತು ಟೀಮ್ ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾರೆ. ಜೈಲಿನಿಂದಲೇ ಸಲ್ಮಾನ್ ಬಗ್ಗೆ ಕೊಲ್ಲುವ ಮಾತುಗಳನ್ನು ಆಡಿದ್ದ.

ಈ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದ.

ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎನ್ನುವ ಮಾತುಗಳನ್ನೂ ಆಡಿದ್ದ. ಲಾರೆನ್ಸ್ ನಂತರ ಇದೀಗ ಗೋಲ್ಡಿ ಬ್ರಾರ್ ಕೂಡ ಅದೇ ಮಾತುಗಳನ್ನು ಆಡಿದ್ದಾನೆ.