ಬೆಂಗಳೂರು: ನರೇಂದ್ರ ಮೋದಿಯವರು ಪ್ರಧಾನಿಯಾಗಿ 9 ವರ್ಷ ಪೂರೈಸಿದ ಹಿನ್ನೆಲೆ ಇಂದು (ಜೂ.27) ಬಿಜೆಪಿ (BJP) ಕಾರ್ಯಕರ್ತರನ್ನು ಉದ್ದೇಶಿಸಿ ಬೆಳಗ್ಗೆ 10.30ಕ್ಕೆ ವರ್ಚುವಲ್ ಮೂಲಕ ಭಾಷಣ ಮಾಡಲಿದ್ದಾರೆ. ರಾಜ್ಯದ ಎಲ್ಲಾ ಬಿಜೆಪಿ ಕಾರ್ಯಕರ್ತರು ಎಲ್ಲಾ ಬೂತ್, ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಸೇರಲು ಸೂಚನೆ ನೀಡಲಾಗಿದೆ. ನಾಳೆ (ಜೂ.28) ರಿಂದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಒಂದು ವಾರ ಕಾಲ ಬಿಜೆಪಿ ಸಂಪರ್ಕ ಅಭಿಯಾನ ನಡೆಯುತ್ತದೆ.
ಜೂನ್ 28ರಿಂದ ಜುಲೈ 5ರವರೆಗೆ ಕರಪತ್ರ ವಿತರಣೆ ಅಭಿಯಾನ
ಜೂನ್ 28ರಿಂದ ಜುಲೈ 5ರವರೆಗೆ ಕರಪತ್ರ ವಿತರಣೆ ಅಭಿಯಾನ ನಡೆಯುತ್ತದೆ. ಪ್ರತಿ ಮನೆಗೆ ಕೇಂದ್ರದ ಸಾಧನೆಗಳ ಕರಪತ್ರ ವಿತರಿಸಲು ನಿರ್ಧರಿಸಲಾಗಿದೆ. ಮನೆ ಮನೆಗೆ ಪ್ರಧಾನಿ ಮೋದಿ ಹೆಸರಿನಲ್ಲಿ ಕರಪತ್ರ ವಿತರಣೆ ಮಾಡಲಾಗುತ್ತದೆ. ಸುಮಾರು 50 ಲಕ್ಷ ಮನೆಗಳಿಗೆ ಕರಪತ್ರ ವಿತರಣೆ ಮಾಡುವ ಗುರಿ ರಾಜ್ಯ ಬಿಜೆಪಿ ಘಟಕ ಹೊಂದಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿ. ಅವರು 2014ರಲ್ಲಿ ಮೊದಲ ಸಲ ಪ್ರಧಾನಮಂತ್ರಿಯಾಗಿದ್ದರು. ನರೇಂದ್ರ ಮೋದಿಯವರು 2019ರ ಮೇ 30 ರಂದು ಎರಡನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಭಾಜನರು.
ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಚಾಲನೆ
ಅಲ್ಲದೇ ಇಂದು ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಭೋಪಾಲ್‌ನ ರಾಣಿ ಕಮಲಾಪಥಿ ರೈಲ್ವೆ ನಿಲ್ದಾಣದಿಂದ ಚಾಲನೆ ನೀಡಲಿದ್ದಾರೆ. ಚಾಲನೆ ಬಳಿಕ ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯುತ್ತದೆ. ಬಳಿಕ ಧಾರವಾಡದಿಂದ ರೈಲು ಹೊರಡಲಿದೆ.
ಧಾರವಾಡದಿಂದ ಬೆಳಗ್ಗೆ 10.30ಕ್ಕೆ ಹೊರಡುವ ರೈಲು ಸಂಜೆ 6.40ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ. ಪ್ರಧಾನಿ ಮೋದಿ ಇಂದು ಒಟ್ಟು 5 ವಂದೇ ಭಾರತ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.