ಧಾರವಾಡ: ಹರಿಯುವ ನೀರಿನ ಮಧ್ಯೆ ನಿಧಾನಕ್ಕೆ ಬಂದು ಸೇರುತ್ತಿರುವ ನೋಡ ನೋಡುತ್ತಿದ್ದಂತೆಯೆ ನೀರಿನ ಮೇಲೆಯೇ ರಾಶಿಯಾಗಿ ನಿಲ್ಲುತ್ತಿದ್ದು, ಗಾಳಿ ಬಿಟ್ಟರೇ ಸಾಕು ಇಡೀ ಪ್ರದೇಶಗಳಲ್ಲಿರುವ ಮನೆಗಳ ಮೇಲೆ ನೊರೆ ಹಾರಿ ಹೋಗುತ್ತಿದೆ. ಧಾರವಾಡದ ಸಾಧುನವರ ಎಸ್ಟೇಟ್ ಪ್ರದೇಶದಲ್ಲಿ, ನಗರದ ಕೊಳಚೆ ನೀರನ್ನು ಹೊರಗೆ ಹಾಕುವ ಹಳ್ಳ ಇದಾಗಿದ್ದು, ಇದು ಮುಂದೆ ಹರಿದು ಹೋಗಿ ತುಪ್ಪರಿ ಹಳ್ಳವನ್ನು ಸೇರುತ್ತದೆ. ಕೆಲಗೇರಿ ಕೆರೆಯಲ್ಲಿ ಹೆಚ್ಚುವರಿಯಾದ ನೀರನ್ನು ಹೊರ ಹಾಕುವುದೂ ಸಹ ಇದೇ ಹಳ್ಳ. ಆದರೆ, ಈಗ ಕೊಳಚೆ ನೀರಿನ ಜೊತೆಗೆ ಯಾವುದೋ ಕೆಮಿಕಲ್ ಸೇರಿದ್ದರಿಂದ ನಿತ್ಯವೂ ನಿರಂತರವಾಗಿ ನೊರೆ ಬಂದು ಶೇಖರಣೆಯಾಗುತ್ತಿದ್ದು, ಅದು ಗಾಳಿ ಬಿಟ್ಟರೇ ಸಾಕು ಹಾರಿ ಹೋಗಿ ಜನರ ಮತ್ತು ಮನೆಗಳ ಮೇಲೆ ಬೀಳುತ್ತಿದೆ. ಕೆಟ್ಟ ವಾಸನೆಯೂ ಸಹ ಇರುವ ಕಾರಣಕ್ಕೆ ಜನ ಹೆದರಿ ಹೊರಗೂ ಬರುತ್ತಿಲ್ಲ. ಇದರಿಂದ ಸಾಧುನವರ ಎಸ್ಟೇಟ್ ಪ್ರದೇಶದ ಗುರುನಗರ, ಹಿರೇಮಠ ಲೇಔಟ್, ಪಾಟೀಲ್ ಲೈಔಟ್ ನ ಸುಮಾರು 150ಕ್ಕೂ ಹೆಚ್ಚು ಮನೆಗಳ ಮೇಲೆ ಪರಿಣಾಮ ಬೀರಿದೆ.
ಇನ್ನು ಈ ಇಡೀ ಪ್ರದೇಶವೇ ಒಂದು ರೀತಿಯಲ್ಲಿ ತ್ರಿಶಂಕು ಸ್ಥಿತಿಯಲ್ಲಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಎದುರಿಗೆ ಬರುವ ಈ ಬಡಾವಣೆ, ನಗರಕ್ಕೆ ಹೊಂದಿಕೊಂಡಿದ್ದರೂ ನಗರ ಪ್ರದೇಶಕ್ಕೆ ಸಂಬಂಧವಿಲ್ಲ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಈ ಬಡಾವಣೆ ಬರುತ್ತದೆ. ಆದರೆ, ಇಲ್ಲಿ ಹರಿಯುತ್ತಿರುವುದು ಧಾರವಾಡ ನಗರ ಪ್ರದೇಶದಲ್ಲಿನ ಪಾಲಿಕೆಗೆ ಸೇರಿದ ಕೊಳಚೆ ನೀರು. ಹೀಗಾಗಿ ಅದು ನಮಗೆ ಸಂಬಂಧವಿಲ್ಲವೆಂದು ಗ್ರಾಮ ಪಂಚಾಯ್ತಿಯವರು ತಲೆ ಕೆಡಿಸಿಕೊಳ್ಳುತ್ತಿಲ್ಲ.