ಶಕ್ತಿ ಯೋಜನೆಗೆ ಚಾಲನೆ ದೊರೆತು ಕಳೆಯಿತು 3 ವಾರ: ಮಹಿಳಾ ಪ್ರಯಾಣ ಸಂಖ್ಯೆಯಲ್ಲಿ ಏರಿ-ಇಳಿತ

ಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಸರ್ಕಾರಿ ನಾನ್​​ ಎಸಿ ಬಸ್​​ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡಿದೆ. ಜೂ.11 ರಂದು ಯೋಜನೆಗೆ ಚಾಲನೆ ದೊರೆತು, ಎರಡು ವಾರ ಕಳೆದಿದೆ. ಪ್ರಾರಂಭದ ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ವಿಪರೀತ ಏರಿಕೆಯಾಗಿತ್ತು. ಪುಣ್ಯ ಕ್ಷೇತ್ರಗಳತ್ತ ಮಹಿಳೆಯರ ದಂಡೇ ಹರಿದು ಹೋಗುತ್ತಿತ್ತು. ಶಕ್ತಿ ಯೋಜನೆಗೆ ಚಾಲನೆ ದೊರೆತು 3 ವಾರ ಕಳೆದಿದ್ದು, ಮಹಿಳಾ ಪ್ರಯಾಣಿಕರ ಸಂಖ್ಯೆ ಅಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪುಣ್ಯಕ್ಷೇತ್ರಗಳಿಗೆ ಪ್ರವಾಸ ಹೋಗುತ್ತಿದ್ದಾರೆ. ಹೀಗೆ ರಾಜ್ಯದ ನಾನಾ ಜಿಲ್ಲೆಗಳ ಮಹಿಳಾ ಪ್ರಯಾಣಿಕರ ಪ್ರಯಾಣದ ಕುರಿತಾದ ವರದಿ ಇಲ್ಲಿದೆ.

ಯಾದಗಿರಿ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಎರಡು ಭಾನುವಾರ ಯಾದಗಿರಿ ತಾಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದರ್ಶನಕ್ಕೆ ಮಹಿಳೆಯರ ದಂಡೆ ಹೋಗುತ್ತಿತ್ತು. ಮಹಿಳೆಯರಿಂದ ಬಸ್​​ಗಳು ಫುಲ್ ರಷ್ ಆಗುತ್ತಿದ್ದವು. ಆದರೆ ಈ ಭಾನುವಾರು ಬಸ್​ಗಳು ಖಾಲಿ ಖಾಲಿಯಾಗಿವೆ.

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಹಿಳೆಯಾಗುತ್ತಿದ್ದ ಹಿನ್ನೆಲೆ ಮಹಿಳೆಯರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ನಿರ್ವಾಹಕರು ಹೇಳುತ್ತಿದ್ದಾರೆ. ಇನ್ನು ದಾವಣಗೆರೆಯಲ್ಲೂ ಇದೇ ಪರಿಸ್ಥಿತಿ ಇದ್ದು, ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಭಾನುವಾರ ರಜಾ ದಿನ ಹಿನ್ನೆಲೆ ‌ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಆದರೂ ಕೆಲ ಮಹಿಳೆಯರು ವಿವಿಧ ಕಾರ್ಯನಿಮಿತ್ಯ ವಿವಿಧ ಕಡೆ ಹೋಗುತ್ತಿದ್ದಾರೆ.

ಇನ್ನು ಬೆಂಗಳೂರಲ್ಲಿ ಮಹಿಳೆಯರು ಚಿಕ್ಕಬಳ್ಳಾಪುರ ಫೌಂಡೇಶನ್ ಕಡೆ ಹೊರಟಿದ್ದಾರೆ. ಬೆಳಿಗ್ಗಿನಿಂದ 20 ಕೆಎಸ್ಆರ್ಟಿಸಿ ಬಸ್ಸುಗಳು ತೆರಳಿವೆ. ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ತುಸು ಏರಿಕೆ ಕಂಡಿದೆ. ನಿನ್ನೆ (ಜೂ.24) ಕಡಿಮೆ ಸಂಖ್ಯೆಯಲ್ಲಿದ್ದ ಮಹಿಳಾ ಪ್ರಯಾಣಿಕರು ಇಂದು (ಜೂ.25) ಮಹಿಳಾ ಪ್ರಯಾಣಿಕರ ಸಂಖ್ಯೆ ಕೊಂಚ ಏರಿಕೆಯಾಗಿದೆ. ಈಶಾ ಫೌಂಡೇಶನ್, ಗಾಟಿ ಸುಬ್ರಮಣ್ಯ, ನಂದಿ ಬೆಟ್ಟ ನೋಡಲು ನಾರಿಯರು ಹೊರಟಿದ್ದಾರೆ.

ಹುಬ್ಬಳ್ಳಿಯ ಬಸ್ ನಿಲ್ದಾಣದಿಂದ ಮಹಿಳೆಯರು ಪುಣ್ಯ ಕ್ಷೇತ್ರಗಳತ್ತ ಹೊರಟಿದ್ದಾರೆ. ಬಸ್ ತುಂಬಾ ಮಹಿಳೆಯರ ದಂಡು ಇದೆ. ಮಹಿಳೆಯರು ಕುಟುಂಬ ಸಮೇತವಾಗಿ ಹೊರಟಿದ್ದಾರೆ. ಹಳೇ ಬಸ್ ನಿಲ್ದಾಣ, ಗೋಕುಲ ರೋಡ್ ಬಸ್ ನಿಲ್ದಾಣದಲ್ಲಿ‌ ಮಹಿಳೆಯರ ದಂಡೇ ಇದೆ.