ಯಾದಗಿರಿ: ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಸಭೆಗೆ ಆಗಮಿಸಿದ್ದ ಇಬ್ಬರು ಮಹಿಳಾ ಸದಸ್ಯರನ್ನು ಹಾಡಹಗಲೇ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕಿಡ್ನಾಪ್ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ನೀಲಗಂಗಮ್ಮ ಹೊಸಳ್ಳಿ ಹಾಗೂ ಬೀಬಿ ಫಾತೀಮಾ ಸೋಪಿಸಾಬ್ ದಫೇದಾರ ಕಿಡ್ನಾಪ್ ಆಗಿರುವ ಮಹಿಳೆಯರು. ಈ ಇಬ್ಬರೂ ನಗನೂರ ಪಂಚಾಯ್ತಿ ವ್ಯಾಪ್ತಿಯ ಖಾನಾಪುರ ಗ್ರಾಮದ ಮಹಿಳಾ ಸದಸ್ಯೆಯರಾಗಿದ್ದಾರೆ. ಈಗ ಕಿಡ್ನಾಪ್ ಆಗಿರುವ ಮಹಿಳೆಯರ ಪತಿಯಂದಿರು ತಮ್ಮ ಪತ್ನಿಯರನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಘಟನೆ ನಡೆದಿರುವ ಪಂಚಾಯ್ತಿ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿನಿಧಿಸುವ ಕ್ಷೇತ್ರವಾಗಿರುವುದು ಗಮನಾರ್ಹ ವಿಚಾರವಾಗಿದೆ. 9 ಪುರುಷ, 10 ಜನ ಮಹಿಳಾ ಸದಸ್ಯರಿರುವ ನಗನೂರ ಪಂಚಾಯ್ತಿಯಲ್ಲಿ ಎಲ್ಲರೂ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದಾರೆ. ನಗನೂರ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಮೀಸಲಾತಿ ಘೋಷಣೆ ಮಾಡುವ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಎಲ್ಲಾ ಸದಸ್ಯರು ಆಗಮಿಸಿದ್ದಾರೆ. ಸಭೆ ಮುಗಿಸಿ ವಾಪಸ್ ಬರುವಾಗ ಅದೇ ಗ್ರಾಮ ಪಂಚಾಯ್ತಿಯ ಸದಸ್ಯರಾದ ಮಹಾಂತಗೌಡ ಪೆÇಲೀಸ್ ಪಾಟೀಲ, ಅನಂತರೆಡ್ಡಿ ಕೆಂಚಗೌಡ್ರ ಹಾಗೂ ಕಾಂಗ್ರೆಸ್ ಮುಖಂಡ ಶರಣಗೌಡ ಕೆಂಚಗೋಳ ಸೇರಿ ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಭೆಗೆ ಕೇವಲ ಗ್ರಾ.ಪಂ. ಸದಸ್ಯರಿಗೆ ಮಾತ್ರ ಅವಕಾಶ ಇರುವ ಹಿನ್ನೆಲೆ ಮಹಿಳಾ ಸದಸ್ಯರ ಗಂಡಂದಿರು ಹೊರಗಡೆ ಪತ್ನಿಯರಿಗಾಗಿ ಕಾಯುತ್ತಾ ಕುಳಿತಿದ್ದರು. ಸಭೆ ಮುಗಿದ ಬಳಿಕ ಹೊರಗಡೆ ಬಂದ ಆರೋಪಿಸಲಾದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮಹಿಳೆಯರನ್ನು ಕರೆದುಕೊಂಡು ಹೋಗಿದ್ದಾರೆ. ಹೆಂಡತಿಯರನ್ನು ಹೇಳದೇ ಕೇಳದೇ ಕರೆದೊಯ್ದ ಸ್ವಪಕ್ಷದ ಕಾಂಗ್ರೆಸ್ ಕಾರ್ಯಕರ್ತರು ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಲ್ಲದೆ ತಮ್ಮದೇ ಪಕ್ಷದ ಒಳಗೆ ನಡೆಯುತ್ತಿರುವ ಗೊಂದಲದಿಂದಾಗಿ ಯಾದಗಿರಿ ಕಾಂಗ್ರೆಸ್ ಘಟಕಕ್ಕೆ ಭಾರೀ ಮುಖಭಂಗ ಉಂಟಾಗಿದೆ.