ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ಸೈಟ್ ಗಳ ಹಂಚಿಕೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಲಾಗಿತ್ತು. ಮುಚ್ಚಿ ಹೋಗಿದ್ದ ಪ್ರಕರಣವನ್ನ ದಾಖಲೆ ಸಮೇತ ಹೊರ ತೆಗೆದ ಟಿವಿ 9 ವಿಸ್ತೃತ ವರದಿಯನ್ನ ಪ್ರಸಾರ ಮಾಡಿ ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿತ್ತು. ಇದಾದ ಬಳಿಕ ಕೋರ್ಟ್ ವರೆಗೂ ಹೋಗಿದ್ದ ಪ್ರಕರಣ ಪೊಲೀಸರಿಗೆ ಕೇಸ್ ದಾಖಲಿಸುವಂತೆ ಆದೇಶ ನೀಡಿತ್ತು. ಕೋರ್ಟ್ ಆದೇಶದ ಬಳಿಕ ಇದೀಗ ಕೇಸ್ ದಾಖಲಾಗಿದೆ. ಅಷ್ಟಕ್ಕೂ ಯಾರ ವಿರುದ್ದ ಕೇಸ್ ದಾಖಲಾಗಿದೆ? ಎಷ್ಟು ಜನರಿಗೆ ಇದೀಗ ಬಂಧನ ಭೀತಿ ಶುರುವಾಗಿದೆ ಅಂತೀರಾ ಈ ಸ್ಟೋರಿ ನೋಡಿ.. ಹೌದು ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ನಿವೇಶನಗಳನ್ನ ಹಂಚಿಕೆ ಮಾರುವ ವಿಚಾರ ಕೋರ್ಟ್ ಮೆಟ್ಟಿಲೇರಿ ಕೊನೆಗೂ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೌದು ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ವಿರುದ್ದ ಕೋರ್ಟ್ ಆದೇಶದ 15 ದಿನದ ಬಳಿಕ ಲೋಕಾಯುಕ್ತ ಬೆಳಗಾವಿ ಕಚೇರಿಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಐಪಿಸಿ ಕಲಂ 120ಬಿ, 405, 406, 420, 425, 463, 464, 465, 466, 468, 477ಎ ಅಡಿ ಮತ್ತು ಲಂಚ ಪ್ರತಿಬಂಬಧಕ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ನಾಲ್ಕು ತಿಂಗಳ ಹಿಂದೆ ಬುಡಾದಲ್ಲಿ ಅಕ್ರಮವಾಗಿ ಸೈಟ್ ಹಂಚಿಕೆ ಕುರಿತು ಟಿವಿ9 ವಿಸ್ತೃತ ವರದಿಯನ್ನ ಬಿತ್ತರ ಮಾಡಿತ್ತು. ವರದಿ ಬಳಿಕ ಸಾಮಾಜಿ ಹೋರಾಟಗಾರ ರಾಜು ಟೋಪಣ್ಣವರ್ ಕೋರ್ಟ್ ಮೋರೆ ಹೋಗಿದ್ದರು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್ ಕೇಸ್ ದಾಖಲಿಸಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ನೀಡತ್ತು. ಹೀಗೆ ಕೋರ್ಟ್ ಆದೇಶದ ಬಳಿಕ ಬುಡಾ ಆಯುಕ್ತ, ಕೆಎಎಸ್ ಅಧಿಕಾರಿ ಪ್ರೀತಮ್ ನಸಲಾಪುರ ವಿರುದ್ದ ಕೇಸ್ ದಾಖಲಿಸಿದ್ದಾರೆ. ಕೇವಲ ಕೇಸ್ ದಾಖಲಿಸಿಕೊಳ್ಳುವುದಷ್ಟೇ ಅಲ್ಲದೇ ಕೂಡಲೇ ಪ್ರೀತಮ್ ನಸಲಾಪುರೆಯನ್ನ ಬಂಧಿಸಬೇಕು. ಸಣ್ಣಪುಟ್ಟ ಕೇಸ್ ನಲ್ಲಿ ಅಧಿಕಾರಿಗಳನ್ನ ಅರೆಸ್ಟ್ ಮಾಡ್ತಾರೆ. ಅದೇ ನೂರಾರು ಕೋಟಿ ಅವ್ಯವಹಾರ ಆಗಿದ್ದು ಹೀಗಿರುವಾಗ ಕೂಡಲೇ ಅವರನ್ನ ಬಂಧಿಸಿ ತನಿಖೆ ನಡೆಸಬೇಕು ಎಂದು ದೂರುದಾರ ರಾಜು ಟೋಪಣ್ಣವರ್ ಒತ್ತಾಯಿಸಿದ್ದಾರೆ.
ಯಾವ ರೀತಿ ಸೈಟ್ ಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿತ್ತು ಅಂತಾ ನೋಡೋದಾದ್ರೇ ಸೈಟ್ ಗಳ ಹರಾಜು ಪ್ರಕ್ರಿಯೆ ಬಗ್ಗೆ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳಿಗೆ ಜಾಹೀರಾತು ನೀಡಬೇಕು. 50 ಲಕ್ಷ ರೂ. ಮೇಲ್ಪಟ್ಟ ಯಾವುದೇ ಕಾಮಗಾರಿ ಇದ್ದರೂ ಪ್ರಾದೇಶಿಕ, ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡಬಾರದು. ರಾಜ್ಯ ಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡಬೇಕು ಎಂಬ ನಿಯಮ ಇದೆ.
ಸೈಟ್‌ಗಳ ಮ್ಯಾನುಅಲ್ ಹರಾಜು ಬಗ್ಗೆ ಬುಡಾ ಅಧಿಕಾರಿಗಳೇ ನೇರವಾಗಿ ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ. ಮಾರ್ಚ್ 16, 17 ರಂದು ಆನ್ ಲೈನ್ ಆಕ್ಷನ್ ಮೆನ್ಷನ್ ಮಾಡಿ ಜನರಿಗೆ ಗೊಂದಲ ಮಾಡಿದ್ದಾರೆ. ಅದನ್ನೂ ಸಹ ಶಿವಮೊಗ್ಗ ಆವೃತ್ತಿಯ ಪ್ರಜಾವಾಣಿ, ಇಂಡಿಯನ್ ಎಕ್ಸ್‌ಪ್ರೆಸ್ ಗೆ ವಾರ್ತಾ ಇಲಾಖೆ ಮುಖೇನ ಜಾಹೀರಾತು ನೀಡಿದ್ದಾರೆ.
ಆದ್ರೆ ಪ್ರಾದೇಶಿಕ ದಿನಪತ್ರಿಕೆಗಳಾದ ಲೋಕವಾರ್ತೆ, ಲೋಕಧ್ವನಿ ಪತ್ರಿಕೆಗೆ ಮ್ಯಾನುಅಲ್ ಆಕ್ಷನ್ ಜಾಹೀತಾತು ಕೊಟ್ಟಿದ್ದಾರೆ. ಇಎಂಡಿ ಹಣ 50 ಸಾವಿರ ಕಟ್ಟಿಸಿಕೊಳ್ಳದೇ ಸೈಟ್ ನೀಡಿದ್ದಾರೆ. ಜತೆಗೆ ಯಾರೂ ಎದುರಿನ ಪಾರ್ಟಿ ಇಲ್ಲದೇ ಸೈಟ್ ನೀಡಿದ್ದು ಇದರಲ್ಲಿ ಪೊಲೀಸರು, ರಾಜಕಾರಣಿಗಳು, ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಲೋಕಾಯುಕ್ತ ಪೊಲೀಸರು ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸಿದರೆ ಎಲ್ಲರ ಬಂಡವಾಳ ಹೊರ ಬರಲಿದೆ ಅಂತಾ ದೂರುದಾರ ರಾಜು ಟೋಪಣ್ಣವರ್ ಹೇಳಿದ್ದಾರೆ.
ಒಟ್ಟಾರೆ ಅಧಿಕಾರಿಗಳು, ರಾಜಕಾರಣಿಗಳು ಸೇರಿಕೊಂಡು ತಮಗೆ ಬೇಕಾದವರಿಗೆ ಸೈಟ್ ಗಳನ್ನ ಕಡಿಮೆ ಹಣಕ್ಕೆ ಮಾರಾಟ ಮಾಡಿದ್ದು ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ ಹಾನಿಯಾಗಿದೆ. 110ಕ್ಕೂ ಅಧಿಕ ಸೈಟ್ ಗಳನ್ನ ಈ ರೀತಿ ಅಕ್ರಮವಾಗಿ ಮಾರಾಟ ಮಾಡಿದ್ದು ಲೋಕಾಯುಕ್ತ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದೇ ಆದ್ರೇ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಲಿದೆ. ಇತ್ತ ಬಂಧನ ಭೀತಿಯಲ್ಲಿರುವ ಬುಡಾ ಆಯುಕ್ತ ಜಾಮೀನಿಗಾಗಿ ಓಡಾಡ್ತಿದ್ದು ಕೂಡಲೇ ಅಧಿಕಾರಿಯನ್ನ ಬಂಧಿಸುವ ಕೆಲಸ ಲೋಕಾಯುಕ್ತರು ಮಾಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.