ಬೆಂಗಳೂರು (ಜೂ.20) ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್) ಮತ್ತೆ ಭ್ರಷ್ಟಾಚಾರದಿಂದಾಗಿ ಸುದ್ದಿಯಾಗಿದ್ದು, ಲೋಕಾಯುಕ್ತ ಪೊಲೀಸರು ನಿಗಮದ ಕಚೇರಿಗೆ ತೆರಳಿ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.
ನಿಗಮದ ಮಾಜಿ ಅಧ್ಯಕ್ಷರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವಧಿಯಲ್ಲಿ ಅವ್ಯವಹಾರ ಮತ್ತು ಲಂಚ ಪ್ರಕರಣದಿಂದ ರಾಜ್ಯಾದ್ಯಂತ ತೀವ್ರ ಸುದ್ದಿಯಾಗಿದ್ದ ಕೆಎಸ್‌ಡಿಎಲ್ ಇದೀಗ ಮತ್ತೊಮ್ಮೆ ಭ್ರಷ್ಟಾಚಾರದಿಂದಾಗಿಯೇ ಸುದ್ದಿಯಾಗಿದೆ. ಶಿವಶಂಕರ್ ಎಂಬುವವರು ಸೇರಿದಂತೆ ಹಲವರು ಲೋಕಾಯುಕ್ತ ಸಂಸ್ಥೆಗೆ ನೀಡಿದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ಕೈಗೊಂಡರು. ಈ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ಆರಂಭಿಸಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ
ಸೋಮವಾರ ಓರ್ವ ಡಿವೈಎಸ್‌ಪಿ ಮತ್ತು 10 ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಯಶವಂತಪುರ ಬಳಿ ಇರುವ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳು ಟೆಂಡರ್ ವಿಚಾರದಲ್ಲಿ ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆಗಲೂ ನಿಗಮದ ಕಚೇರಿಯ ಮೇಲೆ ಕಾರ್ಯಾಚರಣೆ ಕೈಗೊಂಡು ಪರಿಶೀಲನೆ ನಡೆಸಿದ್ದರು. ಇದೀಗ ಮತ್ತೆ ಅವ್ಯವಹಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ಪೊಲೀಸರು ನಿಗಮದಲ್ಲಿ ನಡೆಯುತ್ತಿರುವ ಅವ್ಯವಹಾರ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಕೆಎಸ್‌ಡಿಎಲ್ ರಾಸಾಯನಿಕ ವಸ್ತುಗಳನ್ನು ಪೂರೈಸುವ ಟೆಂಡರ್ ನೀಡಲು ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಗುತ್ತಿಗೆದಾರರಿಂದ 80 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿದ್ದರು. 40 ಲಕ್ಷ ರು. ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿದ್ದು, ಸದ್ಯ ಜಾಮೀನಿನಲ್ಲಿದ್ದಾರೆ.