ಬೆಂಗಳೂರು: ಇತ್ತೀಚೆಗೆ ಬಹುತೇಕ ವೃತ್ತಿಪರ ಕೋರ್ಸ್‌ಗಳನ್ನು ನಡೆಸುವ ಕಾಲೇಜುಗಳು ಕಾಲೇಜಿಗೆ ದಾಖಲಾತಿ ನಡೆಸುವಾಗಲೇ ನಮ್ಮಲ್ಲಿ ಪ್ಲೆಸ್‌ಮೆಂಟ್ ಇದೆ, ಕ್ಯಾಂಪಸ್‌ನಿಂದಲೇ ನೀವು ಉದ್ಯೋಗಕ್ಕೆ ಆಯ್ಕೆಯಾಗಬಹುದು. ನಮ್ಮ ಕಾಲೇಜುಗಳಿಗೆ ವಿವಿಧ ಪ್ರತಿಷ್ಠಿತ ಕಂಪನಿಗಳು ಬಂದು ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿದೆ. ಹೀಗಾಗಿ ಪ್ಲೇಸ್‌ಮೆಂಟ್ ಫೀಸ್ ಅಂತ ಇಷ್ಟು ಹಣ ನೀಡಬೇಕು ಎಂದು ಮೊದಲೇ ವಿದ್ಯಾರ್ಥಿಗಳ ಪೋಷಕರಿಂದ ಕಾಲೇಜು ಆಡಳಿತ ಸಂಸ್ಥೆಗಳು ಹಣ ವಸೂಲಿ ಮಾಡಿರುತ್ತವೆ. ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ಕಂಪನಿಗಳಿಗೆ ಸೆಲೆಕ್ಟ್ ಆಗ್ತಾರೋ ಬಿಡ್ತಾರೋ ಗೊತ್ತಿಲ್ಲ, ಆದರೆ ಕಾಲೇಜುಗಳು ಈ ರೀತಿ ಶುಲ್ಕ ವಸೂಲಿ ಮಾಡುವುದನ್ನು ಮಾತ್ರ ಬಿಡುವುದಿಲ್ಲ. ಆದರೆ ಈಗ ಬೆಂಗಳೂರಿನ ಕಾಲೇಜೊಂದು ಈ ರೀತಿಯ ಶುಲ್ಕ ಮಾತ್ರವಲ್ಲದೇ ಹೀಗೆ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಸಂಬಳದ ಮೇಲೆಯೂ ಕಣ್ಣು ಹಾಕಿದ್ದು, ನಿಮ್ಮ ಸಂಬಳದ ಶೇ. 2.1 ಹಣವನ್ನು ನಮಗೆ ನೀಡಬೇಕು ಇಲ್ಲದೇ ಹೋದಲ್ಲಿ ಪದವಿ ಸರ್ಟಿಫಿಕೇಟ್ ಅನ್ನು ನೀಡುವುದಿಲ್ಲ ಎಂದು ಬೆದರಿಕೆಯೊಡ್ಡಲು ಶುರು ಮಾಡಿದೆಯಂತೆ. ಇದನ್ನು ವಿದ್ಯಾರ್ಥಿಯೋರ್ವಳು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ.
ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ಈ ಬಗ್ಗೆ ವಿದ್ಯಾರ್ಥಿನಿಯೋರ್ವಳು ಬರೆದುಕೊಂಡಿದ್ದು, ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಯ ದಂಧೆಯ ಬಗ್ಗೆ ಬೆಳಕು ಚೆಲ್ಲುತ್ತಿದೆ. ರೆಡಿಟ್‌ನಲ್ಲಿ ಪರ್ಪಲ್‌ರೇಜ್ ಎಕ್ಸ್ ಎಂದು ಬಳಕೆದಾರ ಹೆಸರು ಹೊಂದಿರುವ ವಿದ್ಯಾರ್ಥಿನಿ ಇಲ್ಲಿ ತನ್ನ ಸಂಕಟ ಹೇಳುತ್ತಿದ್ದು, ಕಾಲೇಜಿನ ಈ ವರ್ತನೆಯಿಂದ ತನ್ನ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.
ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದು ಪ್ಲೇಸ್‌ಮೆಂಟ್ ಸೆಲ್ ಶುಲ್ಕ ಎಂದು ಹೇಳಿ ಸ್ಯಾಲರಿಯ ಶೇ.2.1 ಹಣ ಪಾವತಿ ಮಾಡಬೇಕು ವಿದ್ಯಾರ್ಥಿಗಳಿಂದ ಡಿಮ್ಯಾಂಡ್ ಮಾಡುತ್ತಿದೆಯಂತೆ. ಈ ಕಾಲೇಜು ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್ ಮೂಲಕ ಉದ್ಯೋಗಕ್ಕೆ ಆಯ್ಕೆಯಾದರೆ ಅಂತಹವರಿಂದ ಈ ರೀತಿ ವಸೂಲಿಗೆ ಇಳಿದಿದೆ. ಈ ಹಣವನ್ನು ಪಾವತಿ ಮಾಡದ ಕಾರಣಕ್ಕೆ ತನ್ನ ಪ್ರಮಾಣ ಪತ್ರಗಳನ್ನು ನೀಡದೇ ಕಾಲೇಜು ಆಟವಾಡಿಸುತ್ತಿದೆ . ಇದರಿಂದ ಉದ್ಯೋಗ ಸಂಸ್ಥೆಯ ಜೊತೆ ನನಗೆ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
ಅಲ್ಲದೇ ಈ ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಅವರು ಯಾವುದೇ ದಾಖಲೆಯಾಗಲಿ ನೋಟೀಸ್ ಆಗಲಿ ನೀಡಿಲ್ಲ, ಕೇವಲ ಮೌಖಿಕವಾಗಿ ನಮಗಿಷ್ಟು ಹಣ ಪಾವತಿ ಮಾಡಿ ಎಂದು ನಮ್ಮ ಬೆನ್ನಿಗೆ ಬಿದ್ದಿದ್ದಾರೆ. ಅಲ್ಲದೇ ನಾನಿನ್ನು ಉದ್ಯೋಗವನ್ನೇ ಆರಂಭಿಸಿಲ್ಲ, ನಾನು ಕೇವಲ ಈಗಷ್ಟೇ ಪದವಿ ಪೂರ್ಣಗೊಳಿಸಿದ್ದೇನೆ ಅಷ್ಟೇ, ಅಷ್ಟರಲ್ಲೇ ಕಾಲೇಜು ನಮ್ಮ ಸಂಬಳದ ಸಿಟಿಸಿಯ ಶೇ.2.1 ಹಣ ನೀಡುವಂತೆ ಕೇಳುತ್ತಿದೆ. ನಮ್ಮ ಕಾಲೇಜು ನನಗಿಂತ ಹಿಂದಿನ ಬ್ಯಾಚ್ ವಿದ್ಯಾರ್ಥಿಗಳಿಗೂ ಹೀಗೆ ಮಾಡಿದೆ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ. ಆದರೆ ವಿದ್ಯಾರ್ಥಿನಿ ಎಲ್ಲೂ ತನ್ನ ಕಾಲೇಜಿನ ಹೆಸರನ್ನು ಬಹಿರಂಗಪಡಿಸಿಲ್ಲ, ಇಲ್ಲಿಂದ ಪದವಿ ಪಡೆದವರು ಯಾರು ಪ್ಲೇಸ್‌ಮೆಂಟ್‌ನಲ್ಲಿ ಆಯ್ಕೆಯಾಗಿಲ್ಲ, ನಾನು ಈಗಲೂ ಅದೇ ರೀತಿ ಪ್ಲೇಸ್‌ಮೆಂಟ್ ಟ್ರೈನಿಂಗ್ ಫೀ ಎಂಬುದನ್ನು ಕಟ್ಟುತ್ತಿದ್ದೇನೆ ಎಂದು ಓರ್ವ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇನ್ನು ಪೋಷಕರು ಕೂಡ ಅಷ್ಟೊಂದು ವೆಚ್ಚ ಮಾಡಿ ವೃತ್ತಿಪರ ಕೋರ್ಸ್ ಮಾಡಿದ ನಂತರ ಉದ್ಯೋಗ ಸಿಗದಿದ್ದರೆ ಹೇಗೆ ಎಂದು ಇಂತಹ ಪ್ಲೇಸ್‌ಮೆಂಟ್ ಫೀಗಳನ್ನು ಮೊದಲೇ ಕಟ್ಟಿರುತ್ತಾರೆ. ನಮ್ಮಲ್ಲಿ ಕೋರ್ಸ್ ಮಾಡಿದರೆ ಉದ್ಯೋಗ ಪಕ್ಕಾ ಎಂಬ ಭರವಸೆಯನ್ನು ಶಿಕ್ಷಣ ಸಂಸ್ಥೆಗಳು ನೀಡುತ್ತವೆ. ಒಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಇಂದು ಕೇವಲ ಜ್ಞಾನಾರ್ಜನೆಯ ಕೇಂದ್ರಗಳಾಗಿ ಉಳಿದಿಲ್ಲ, ದಿನಕ್ಕೆ ಕೋಟ್ಯಾಂತರ ರೂ ವ್ಯವಹಾರ ನಡೆಸುವ ಕೇಂದ್ರಗಳಾಗಿ ಬದಲಾಗಿದ್ದು, ಮಕ್ಕಳ ಪೋಷಕರಿಂದ ಸುಲಿಗೆ ಸಾಮಾನ್ಯ ಎನಿಸಿದೆ. ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡುವಾಗಲೇ ವಿದ್ಯಾರ್ಥಿಗಳಿಂದ ಲಕ್ಷಾಂತರ ವಸೂಲಿ ಮಾಡುವ ಕಾಲೇಜುಗಳು ಕಾಲೇಜು ಬಿಡುವ ಸಂದರ್ಭದಲ್ಲೂ ವಸೂಲಿ ಮಾಡುವುದನ್ನು ಬಿಡುವುದಿಲ್ಲ.