ಸರ್ಕಾರಕ್ಕೆ ಶಾಕ್​ ನೀಡಿದ ಗುತ್ತಿಗೆದಾರರ ಸಂಘ: ಬಾಕಿ ಬಿಲ್​ ಪಾವತಿಸದಿದ್ದರೆ ಎಲ್ಲ ಕಾಮಗಾರಿಗಳು ಬಂದ್

ಬೆಂಗಳೂರು: ಸರ್ಕಾರವು ತನ್ನ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಬ್ಯುಸಿಯಾಗಿದೆ. ಅಲ್ಲದೇ ಹೊಸ ಟೆಂಡರ್ ಹಾಗೂ ಕಾಮಗಾರಿಗಳಿಗೆ ತಡೆ ನೀಡಿದ್ದ ಸರ್ಕಾರಕ್ಕೆ ಇದೀಗ ಬಿಗ್ ಟೆನ್ಷನ್ ಶುರುವಾಗಿದೆ. ಬಾಕಿ ಇರುವ ಬಿಲ್​​ಗಳನ್ನು ಜೂ.29ರ ಒಳಗಾಗಿ​ ಪಾವತಿಸಬೇಕು ಇಲ್ಲದಿದ್ದರೇ ಎಲ್ಲ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಬಿಬಿಎಂಪಿಯ ವಲಯಗಳ ಮುಖ್ಯ ಇಂಜಿನಿಯರ್​​ಗಳಿಗೆ ಪತ್ರ ಬರೆದಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದರು ಮತ್ತು ಹಿಂದಿನ ಬಿಜೆಪಿ ಸರ್ಕಾರವು ಪ್ರಾರಂಭಿಸಿದ ಯೋಜನೆಗಳ ಮರುಪರಿಶೀಲನೆಯವರೆಗೂ ಬಿಲ್‌ಗಳಿಗೆ ತಡೆಹಿಡಿದಿದ್ದಾರೆ.

ಈ ನಿರ್ಧಾರದಿಂದ ಕುಪಿತಗೊಂಡಿರುವ ಬಿಬಿಎಂಪಿ ಗುತ್ತಿಗೆದಾರರು ಜೂನ್ 14ರಂದು ಸಭೆ ನಡೆಸಿ ಈ ಕುರಿತು ತೀರ್ಮಾನ ಕೈಗೊಂಡಿದ್ದಾರೆ. ಅಮೃತ ನಗರೋತ್ಥಾನ ಯೋಜನೆಯಡಿ ಮಂಜೂರಾಗಿರುವ ಕನಿಷ್ಠ 650 ಕೋಟಿ ರೂ.ಗಳ ಬಾಕಿ ಬಿಲ್‌ಗಳನ್ನು ಸರ್ಕಾರ ಬಿಡುಗಡೆ ಮಾಡಬೇಕು. ಒಂದು ವೇಳೆ ವಿಫಲವಾದರೇ ಜೂನ್ 29 ರಿಂದ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಬಿಎಂಪಿಗೆ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಬಿಬಿಎಂಪಿ ಗುತ್ತಿಗೆದಾರರು 2,500 ಕೋಟಿ ರೂಪಾಯಿಗಳ ಬಾಕಿ ಬಿಲ್‌ಗಳನ್ನು ಸರ್ಕಾರ ಇನ್ನೂ ಕ್ಲಿಯರ್ ಮಾಡಿಲ್ಲ. ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದರೆ ಕಸ ತೆರವಿನಿಂದ ಹಿಡಿದು ರಸ್ತೆ ದುರಸ್ತಿ ಕಾಮಗಾರಿ ಸ್ಥಗಿತಗೊಳ್ಳುವುದರಿಂದ ನಗರದಾದ್ಯಂತ ಸಮಸ್ಯೆ ಉಂಟಾಗಬಹುದು. ಈ ಹಿಂದೆ ಸಂಘವು ತಮ್ಮ ಬಿಲ್‌ಗಳನ್ನು ತೆರವುಗೊಳಿಸಲು ಜೂನ್ 5 ರವರೆಗೆ ಗಡುವು ನೀಡಿದ್ದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಪ್ರಸ್ತುತ, ಬಡತನ ರೇಖೆಗಿಂತ ಕೆಳಗಿರುವ ಕಾರ್ಡುದಾರರಿಗೆ 10 ಕೆಜಿ ಉಚಿತ ಆಹಾರ ಧಾನ್ಯ ನೀಡುವ ಭರವಸೆ ನೀಡುವ ‘ಅನ್ನ ಭಾಗ್ಯ’ ಯೋಜನೆಯನ್ನು ಜಾರಿಗೆ ತರಲು ಸರ್ಕಾರವು ಇತರ ರಾಜ್ಯಗಳಿಂದ ಅಕ್ಕಿ ಖರೀದಿಸುವಲ್ಲಿ ನಿರತವಾಗಿದೆ.