ಗ್ರಾಹಕರ ಗಿರವಿ ಚಿನ್ನ ಎಗರಿಸಿ ನಕಲಿ ಚಿನ್ನ ತಂದಿಟ್ಟು 1 ಕೋಟಿ ರೂ. ವಂಚಿಸಿದ ಬ್ಯಾಂಕ್ ನೌಕರ ಅರೆಸ್ಟ್

ಹಾಸನ: ಗ್ರಾಹಕರು ಬ್ಯಾಂಕ್‍ನಲ್ಲಿ ಗಿರಿವಿ ಇಟ್ಟಿದ್ದ ಚಿನ್ನವನ್ನು ಕಳ್ಳತನ ಮಾಡಿ, ನಕಲಿ ಚಿನ್ನ ತಂದಿಟ್ಟ ಆರೋಪದ ಮೇಲೆ ಬ್ಯಾಂಕ್ ಸಿಬ್ಬಂದಿಯೊಬ್ಬನನ್ನು ಬಂಧಿಸಿದ ಪ್ರಕರಣ ಹಾಸನದ ಬೆಳವಾಡಿಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಲವ ಬಿ.ಎನ್ ಎಂದು ಗುರುತಿಸಲಾಗಿದೆ. ಆರೋಪಿ 1 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿದ್ದಾನೆ. ಅಲ್ಲದೇ ಆ ಜಾಗದಲ್ಲಿ ನಕಲಿ ಚಿನ್ನವನ್ನು ತಂದಿಟ್ಟಿದ್ದ ಎಂದು ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕಿ ಅನುರಾಧ ಅವರು ಆರೋಪಿಸಿದ್ದಾರೆ. 

ಆರೋಪಿ ಬೆಳವಾಡಿ ಗ್ರಾಮದ ಎಸ್‍ಬಿಐ ಶಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಬ್ಯಾಂಕ್ ಅಧಿಕಾರಿಗಳ ಜೊತೆ ವಿಶ್ವಾಸಗಳಿಸಿ 2013 ರಿಂದ ಚಿನ್ನದ ಸಾಲದ ದಾಸ್ತಾನು ಉಸ್ತುವಾರಿ ವಹಿಸಿಕೊಂಡಿದ್ದ. ಇದನ್ನೇ ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ

ಇತ್ತೀಚೆಗೆ ಗಿರವಿ ವಿಭಾಗದ ಚಿನ್ನವನ್ನು ಪರಿಶೀಲನೆ ಮಾಡಿದ ವೇಳೆ ವಂಚನೆ ಬಯಲಾಗಿದೆ. 30 ಪ್ಯಾಕೆಟ್ ಚಿನ್ನದಲ್ಲಿ 18 ಪ್ಯಾಕೆಟ್ ನಕಲಿ ಚಿನ್ನ ಇರುವುದು ಪತ್ತೆಯಾಗಿತ್ತು. ಅದರಲ್ಲಿ 2 ಪ್ಯಾಕೆಟ್ ಚಿನ್ನವನ್ನು ಸಂಪೂರ್ಣ ಕಳ್ಳತನ ಮಾಡಲಾಗಿದೆ. ಉಳಿದ ಪ್ಯಾಕೆಟ್‍ಗಳಲ್ಲಿ ಕೆಲವು ಚಿನ್ನದ ಆಭರಣವನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.