ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ, ಜೂನ್ 26ಕ್ಕೆ ಮೋದಿ ಚಾಲನೆ

ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ Vande Bharat Express  ಟ್ರಯಲ್ ರನ್ ಸೋಮವಾರ ಬೆಳಿಗ್ಗೆ ಪ್ರಾರಂಭವಾಗಿದೆ. ಜೂನ್ 26 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಈ ಸೂಪರ್-ಫಾಸ್ಟ್ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. ನೈಋತ್ಯ ರೈಲ್ವೆ ಪ್ರಕಾರ, ಪ್ರಾಯೋಗಿಕ ಚಾಲನೆಗಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣದಿಂದ ಬೆಳಿಗ್ಗೆ 5.45ಕ್ಕೆ ಹೊರಟು ಧಾರವಾಡ ನಿಲ್ದಾಣವನ್ನು ಮಧ್ಯಾಹ್ನ 12. 45ಕ್ಕೆ ತಲುಪಲಿದೆ. ಮತ್ತೆ ರೈಲು ಧಾರವಾಡ ನಿಲ್ದಾಣದಲ್ಲಿ ಮಧ್ಯಾಹ್ನ 1.15ಕ್ಕೆ ಆರಂಭವಾಗಲಿದ್ದು, ರಾತ್ರಿ 8.10ಕ್ಕೆ ಕೆಎಸ್‌ಆರ್‌ ನಿಲ್ದಾಣ ತಲುಪಲಿದೆ. ಇದು ಕರ್ನಾಟಕಕ್ಕೆ ಎರಡನೇ ಹಂತದ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುರುವಾರ ಚೆನ್ನೈನ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಿಂದ ಬೆಂಗಳೂರಿನ ಕೆಎಸ್‌ಆರ್ ನಿಲ್ದಾಣಕ್ಕೆ ಬಂದಿದೆ.

ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರೈಲು ಸೇವೆ ಆರಂಭವಾಗಲಿದ್ದು, ದಾವಣಗೆರೆಯಲ್ಲಿ ಮಾತ್ರ ನಿಲುಗಡೆಯಾಗಲಿದೆ. ವಂದೇ ಭಾರತ್ ರೈಲಿನಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವಿನ ಪ್ರಯಾಣದ ಸಮಯವು ಸರಿಸುಮಾರು ಏಳು ಗಂಟೆಗಳು ಎಂದು ಹೇಳಲಾಗಿದೆ, ಇತರ ಸಾಮಾನ್ಯ ರೈಲುಗಳಲ್ಲಿ ಒಂಬತ್ತರಿಂದ ಹತ್ತು ಗಂಟೆಗಳು ತೆಗೆದುಕೊಳ್ಳುತ್ತದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದ ಚೆನ್ನೈ-ಬೆಂಗಳೂರು-ಮೈಸೂರು ರೈಲು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ.