ಒಂದೇ ಒಂದು ಚಿಕ್ಕ ಮಿಸ್‌ ಅಂಡರ್‌ಸ್ಟಾಂಡಿಂಗ್​ಗೆ ಪ್ರೇಮಿಗಳಿಬ್ಬರ ದುರಂತ ಅಂತ್ಯ, ಎರಡೇ ದಿನದ ಅಂತರದಲ್ಲಿ ಇಬ್ಬರ ಆತ್ಮಹತ್ಯೆ

ಬೆಂಗಳೂರು: ಒಂದೇ ಒಂದು ಚಿಕ್ಕ ಮಿಸ್‌ ಅಂಡರ್‌ಸ್ಟಾಂಡಿಂಗ್​ಗೆ ಪ್ರೇಮಿಗಳಿಬ್ಬರ ದುರಂತ ಅಂತ್ಯವಾಗಿದೆ. ನನ್ನನ್ನ ಬಿಟ್ಟು ಹೋದಳು ಎಂದು ಯುವಕ ಆತ್ಮಹತ್ಯೆಗೆ ಶರಣಾಗಿದ್ದು ಪ್ರಿಯಕರನ ಸಾವನ್ನು ಸಹಿಸಲಾಗದೆ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಂದೇ ಒಂದು ಮಿಸ್‌ ಅಂಡರ್‌ಸ್ಟಾಂಡಿಂಗ್​ಗೆ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಧಾರಾ ಸಂಶುಕಾ ಹಾಗೂ ದೀಪೇಂದ್ರ ಕುಮಾರ್‌ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೇ ಕಂಪನಿ, ಒಂದೇ ರಾಜ್ಯದವರಾಗಿದ್ದರಿಂದ ಸಹಜವಾಗಿಯೇ ಇಬ್ಬರಲ್ಲೂ ಒಳ್ಳೆಯ ಸ್ನೇಹ ಬೆಳೆದಿತ್ತು. ಸ್ನೇಹ ಪ್ರೀತಿಯಾಗಿ ಇಬ್ಬರೂ ಹೆಚ್ಚು ಹಚ್ಚಿಕೊಂಡಿದ್ದರು. ಜೊತೆಯಾಗಿ ಸುತ್ತಾಡುವುದು, ಫೋಟೋ ತೆಗೆಸಿಕೊಳ್ಳುವುದು, ಹೀಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಲವ್ ಬರ್ಡ್​ ರೀತಿ ಹಾರಾಡುತ್ತಿದ್ದರು. ಈ ರೀತಿ ಇದ್ದಾಗ ಕಳೆದ ಐದು ದಿನಗಳ ಹಿಂದೆ ದೀಪೇಂದ್ರ ಕುಮಾರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಗೆಳೆಯರಿಗೆ ಗುಡ್ ಬೈ ಎಂದು ಮೆಸೇಜ್ ಹಾಕಿ ನೇಣಿಗೆ ಶರಣಾಗಿದ್ದ. ಪರಿಶೀಲನೆ ನಡೆಸಿದಾಗ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಅಂತ ಗೊತ್ತಾಗಿತ್ತು. ತಾನು ಪ್ರೀತಿಸುತ್ತಿರುವ ಧಾರಾಳನ್ನು ಆಕೆಯ ಮನೆಯವರು ಬಲವಂತವಾಗಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆ. ಅವಳಿಲ್ಲದೆ ನಾನು ಬದುಕುವುದು ಹೇಗೆ ಎಂದು ಆತ ಪ್ರಾಣ ಕಳೆದುಕೊಂಡಿದ್ದು ಮೃತ ಯುವಕನ ಕುಟುಂಬದವರ ಮಾಹಿತಿ ಮೇರೆಗೆ ಮಾರತ್ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇನ್ನು ಮತ್ತೊಂದೆಡೆ ಯುವಕ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ನಿರ್ಮಾಣದ ಹಂತದ ಕಟ್ಟಡದ ಮೇಲಿಂದ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ಯುವತಿ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ. ಬಳಿಕ ಯುವತಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಜೊತೆಗಿನ ಫೋಟೋಗಳು ಸಿಕ್ಕಿವೆ. ಆಗ ಪೊಲೀಸರಿಗೆ ಇಬರಿಬ್ಬರೂ ಪ್ರೇಮಿಗಳಾಗಿದ್ದು ಯುವಕನ ಸಾವಿನ ನಂತರ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡ ದೀಪೇಂದ್ರ ಒಂದು ಚಿಕ್ಕ ಮಿಸ್‌ ಅಂಡರ್‌ಸ್ಟಾಂಡಿಂಗ್ ಮಾಡಿಕೊಂಡಿದ್ದ. ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಪ್ಪು ಮಾಹಿತಿಯಿಂದ ದೀಪೇಂದ್ರ ಕುಮಾರ್ ಪ್ರಾಣ ಕಳೆದುಕೊಂಡಿದ್ದ. ತನ್ನ ಪ್ರಿಯಕರ ಸಾವನಪ್ಪಿದ್ದ ಅಂತ ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಮಾರತ್ ಹಳ್ಳಿ ಪೊಲೀಸ್ ಠಾಣೆ ಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತಪ್ಪುಗ್ರಹಿಕೆಯಿಂದ ಪ್ರೇಮಿಗಳಿಬ್ಬರು ದುರಂತ ಅಂತ್ಯ ಕಂಡಂತಾಗಿದೆ.

ಆದ್ರೆ ಈ ಘಟನೆ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ, ಒಂದು ಮಾಹಿತಿಯ ಪ್ರಕಾರ, ಯುವಕ-ಯುವತಿ ಮಧ್ಯೆ ಸಣ್ಣದೊಂದು ಮನಸ್ತಾಪವಾಗಿದ್ದು. ತನ್ನನ್ನು ಮನೆಯವರು ಪಶ್ಚಿಮ ಬಂಗಾಳಕ್ಕೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಬೇರೆ ಮದುವೆ ಮಾಡಿಸುವವರಿದ್ದಾರೆ. ಹೀಗಾಗಿ ಮತ್ತೆ ಸಿಗುವುದಿಲ್ಲ ಎಂದು ಯುವತಿ ಹೇಳಿದ್ದಳು. ಇದನ್ನೇ ಸತ್ಯವೆಂದು ನಂಬಿದ ಯುವಕ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇದರಿಂದ ಮನ ನೊಂದ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.