ಪ್ರತಿಯೊಬ್ಬ ಬೌಲರ್‌ಗೂ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಬೇಕೆಂಬ ಮಹಾ ಕನಸು ಇದ್ದೆ ಇರುತ್ತದೆ. ಆದರೆ ಕ್ರಿಕೆಟ್ ಆಡುವ ಎಲ್ಲಾ ಬೌಲರ್‌ಗೂ ಈ ಸಾಧನೆಯನ್ನು ಮಾಡುವುದು ಕಷ್ಟಸಾಧ್ಯ. ವಿಶ್ವ ಕ್ರಿಕೆಟ್ನ ಅದೇಷ್ಟೋ ಪ್ರಮುಖ ಬೌಲರ್ಗಳು ಹ್ಯಾಟ್ರಿಕ್ ವಿಕೆಟ್ ಪಡೆಯದೆ ತಮ್ಮ ವೃತ್ತಿ ಬದುಕನ್ನು ಮುಗಿಸಿದ್ದಾರೆ. ಇನ್ನೂ ಕೆಲವು ಬೌಲರ್ಗಳು ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆಯನ್ನು ಬರೆದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಒಂದು ಹ್ಯಾಟ್ರಿಕ್ ಪಡೆಯುವುದಕ್ಕೆ ಕಷ್ಟಪಡುವ ಬೌಲರ್ಗಳ ಮಧ್ಯೆ ಇಲ್ಲೊಬ್ಬ 12 ವರ್ಷದ ಪೋರ ಒಂದೇ ಓವರ್‌ನಲ್ಲಿ ಎರಡರೆಡು ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಬರೆದಿದ್ದಾನೆ.
ಇಂಗ್ಲೆಂಡ್ನಲ್ಲಿ ಈ ದಾಖಲೆ ಸೃಷ್ಟಿಯಾಗಿದ್ದು, 12ರ ಹರೆಯದ ಒಲಿವರ್ ವೈಟ್‌ಹೌಸ್ ಎಂಬ ಬಾಲ ಕ್ರಿಕೆಟಿಗ ಈ ದಾಖಲೆ ನಿರ್ಮಿಸಿದ್ದಾನೆ. ಈ ಪಂದ್ಯದಲ್ಲಿ ಇಂಗ್ಲೆಂಡ್ನ ಬ್ರೋಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದಿದ್ದ ವೈಟ್‌ಹೌಸ್, ಕುಕ್ಹಿಲ್ ತಂಡದ ವಿರುದ್ಧ ಆರು ಎಸೆತಗಳಲ್ಲಿ ಆರು ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದಾರೆ. ಇನ್ನು ತಮ್ಮ ಖೋಟಾದಲ್ಲಿ ಕೇವಲ ಎರಡು ಓವರ್ ಬೌಲ್ ಮಾಡಿದ ವೈಟ್‌ಹೌಸ್, ಒಂದೇ ಒಂದು ರನ್ ಬಿಟ್ಟುಕೊಡದೆ ಎಂಟು ವಿಕೆಟ್‌ಗಳನ್ನು ಪಡೆದರು.
ಇನ್ನು ವೈಟ್‌ಹೌಸ್ ಸಾಧನೆಯನ್ನು ಮನಸಾರೆ ಕೊಂಡಾಡಿರುವ ಬ್ರೂಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್ ಮೊದಲ ತಂಡದ ನಾಯಕ ಜೇಡೆನ್ ಲೆವಿಟ್, ವೈಟ್‌ಹೌಸ್ ಮಾಡಿದ್ದನ್ನು ನಂಬಲು ಸಾಧ್ಯವಾಗುತ್ತಿಲ್ಲ.ಅದು ಎಷ್ಟು ದೊಡ್ಡ ಸಾಧನೆ ಎಂದು ವೈಟ್ಹೌಸ್ಗೆ ತಿಳಿದಿಲ್ಲ, ಆದರೆ ನಂತರ ಅವನು ಅದರ ಮಹತ್ವವನ್ನು ಅರಿತುಕೊಳ್ಳಲ್ಲಿದ್ದಾನೆ ಎಂದಿದ್ದಾರೆ. ಸದ್ಯ ವೈಟ್‌ಹೌಸ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಬ್ರೂಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೈಟ್‌ಹೌಸ್ ಅವರ ಡಬಲ್ ಹ್ಯಾಟ್ರಿಕ್ ಸಾಧನೆಯನ್ನು ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಕ್ಲಬ್ ಮಾಡಿದ ಪೋಸ್ಟ್ ಕೆಲವೇ ಗಂಟೆಗಳಲ್ಲಿ 45,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.